ದಾವಣಗೆರೆ: ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ವಿಚಾರಣಾ ಆರೋಪಿ ಆದಿಲ್ ಸಾವು ಪ್ರಕರಣ ಹಾಗೂ ಚನ್ನಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾವಣೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಈ ಪ್ರಕರಣ ಸಂಬಂಧ 25 ಜನ ಬಂಧಿಸಲಾಗಿದೆ. ಬಂಧಿತರ ಮೇಲೆ ಐಪಿಸಿ 353 ಮತ್ತು 307 ಅನ್ವಯ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಬಂಧಿತರ ಮೇಲೆ ಯಾವುದೇ ಹಳೇ ಕೇಸ್‌ಗಳಿಲ್ಲ. ಗುಂಪಿನಲ್ಲಿದ್ದ ಕೆಲ ಯುವಕರು ಠಾಣೆ ಮೇಲೆ ಕಲ್ಲು ತೂರಿದ್ದಾರೆ. ಚನ್ನಗಿರಿ ಟೌನ್ ಮತ್ತು ತಾಲೂಕಿನ ಹೊನ್ನೇಬಾಗಿ ನಲ್ಲೂರು ಸೇರಿ ವಿವಿಧ ಹಳ್ಳಿಗಳಿಂದ ಬಂದ ಯುವಕರು ಗುಂಪಿನಲ್ಲಿದ್ದರು.
ಆದಿಲ್ ಮರಣೋತ್ತರ ಪರೀಕ್ಷೆ ನಡೆದಿದ್ದು, ಇನ್ನಷ್ಟೇ ವರದಿ ನಮ್ಮ ಕೈಸೇರಬೇಕಿದೆ. ಇನ್ಮೆರೆಡು ದಿನಗಳಲ್ಲಿ ವರದಿ ಬರುವ ಸಾಧ್ಯತೆ ಇದೆ ಎಂದು ಹೇಳಿದರು. ಯುವಕನ ಲಾಕಪ್ ಡೆತ್ ಆಗಿದೆ ಎಂದು ಆರೋಪಿಸಿ ಕುಟುಂಬಸ್ಥರು ಚನ್ನಗಿರಿ ಪೊಲೀಸ್ ಠಾಣೆಯ ಎದುರು ಮೇ 24ರಂದು ರಾತ್ರಿ ಗಲಭೆ ನಡೆಸಿದ್ದರು. ಈ ವೇಳೆ ಕೆಲ ಕಿಡಿಗೇಡಿಗಳು ಠಾಣೆ ಮೇಲೆ ಕಲ್ಲು ತೂರಾಟ ನಡೆಸಿ, ವಾಹನಗಳನ್ನು ಜಖಂಗೊಳಿಸಿದ್ದರು. ಐದು ಪೊಲೀಸ್ ವಾಹನ ಜಖಂಗೊಂಡು, ಹನ್ನೊಂದು ಪೊಲೀಸರಿಗೆ ಗಾಯಗಳಾಗಿದ್ದವು. 200ಕ್ಕೂ ಹೆಚ್ಚು ಜನರಿಂದ ಏಕಕಾಲಕ್ಕೆ ದಾಳಿಯಾದ ಹಿನ್ನೆಲೆ ಚನ್ನಗಿರಿ ಪಟ್ಟಣದಲ್ಲಿ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿತ್ತು.
ಈಗ ಶವ ಪರೀಕ್ಷೆ ವರದಿ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಆದಿಲ್ ಪೊಲೀಸ್ ಠಾಣೆಯಲ್ಲಿದ್ದದ್ದು ಕೇವಲ ಏಳು ನಿಮಿಷ. ಈ ವೇಳೆ ಕಡಿಮೆ ರಕ್ತದೊತ್ತಡದಿಂದ ಹೃದಯಾಘಾತವಾಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.ಚನ್ನಗಿರಿ ಪಟ್ಟಣ ಸಹಜ ಸ್ಥಿತಿಯತ್ತ ಮರಳುತ್ತಿದೆ. ನಗರದಲ್ಲಿ ಪೊಲೀಸ್ ಬಂದೋಬಸ್ತ್ ಮುಂದುವರಿದಿದೆ.



