ಡಿವಿಜಿ ಸುದ್ದಿ, ಚನ್ನಗಿರಿ: ಮಾನವ ಮಹಾ ದಾನಿಯಲ್ಲ, ಮಹಾ ದಾಸೋಹಿ. ಮಾನವ ದೇವರಿಂದ ಪಡೆದನ್ನು ದಾನ ಮಾಡುತ್ತಾನೆ. ಅದು ದಾನ ಆಗುವುದಿಲ್ಲ, ದಾಸೋಹ ಆಗುತ್ತದೆ ಎಂದು ತರಳಬಾಳು ಶಾಖಾ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲೂಕಿನ ಬೆಳ್ಳಿಗನೂಡು ಗ್ರಾಮದಲ್ಲಿ ಭಕ್ತರೊಬ್ಬರ ಗೃಹ ಪ್ರವೇಶ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ದಾನದಿಂದ ಕೊಡುವನು ಶ್ರೇಷ್ಟ ಆಗ್ತಾನೆ. ಪಡೆಯುವನು ಕನಿಷ್ಟ ಆಗ್ತಾನೆ. ದಾಸೋಹದಲ್ಲಿ ಆ ಭಾವ ಇಲ್ಲ. ಹಾಗಾಗಿ ಶರಣರು ಒತ್ತಿ ಹೇಳಿದ್ದು ದಾಸೋಹ ತತ್ವವನ್ನು ಹೊರತಾಗಿ ದಾನ ತತ್ವವನ್ನಲ್ಲ. ದಾನ ಕೊಡುವ ಶಕ್ತಿ ಮನುಷ್ಯನಿಗಿಲ್ಲವೆಂದು ಒಂದು ಕಡೆ ವಚನಕಾರರು ಹೇಳಿದ್ದಾರೆ ಎಂದರು.
ಎಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ, ಸುಳಿದು ಸೂಸುವ ಗಾಳಿ ನಿಮ್ಮ ದಾನ, ನಿಮ್ಮ ದಾನವನುಂಡು ಅನ್ಯರ ಹೊಗುಳುವ ಕುನ್ನಿಗಳನೆನ್ನಬೇಕು ರಾಮನಾಥ. ಈ ಭೂಮಿ, ನೀರು, ಮಳೆ, ಬೆಳೆ, ಬೆಳಕು ಕೊಡುವಂತಹ ಶಕ್ತಿ ಮಾನವನಿಗಿಲ್ಲ. ಇದೆಲ್ಲಾ ದೇವರಿಂದ ಬಂದಂತಹ ಕೊಡುಗೆ. ಆ ಕೊಡುಗೆಯನ್ನು ಪಡೆದ ನಾವು ದುಡಿಮೆ ಮಾಡಿಕೊಂಡು ಬೇರೊಬ್ಬರಿಗೆ ಸಹಾಯ ಮಾಡುವುದನ್ನು ದಾಸೋಹ ಎಂದು ಕರೆಯುವರು ಆಶೀರ್ವಚನ ನೀಡಿದರು.
ಮಾನವನಿಗೆ ಶಬ್ದಗಳ ಕೊರತೆಯಿಂದಾಗಿ ದಾನಶೂರ ಕರ್ಣ ದಾನ ಚಿಂತಮಣಿ ಧರ್ಮ ಚಿಂತಮಣಿ ಸೇರಿದಂತೆ ಇನ್ನೂ ಅನೇಕ ಪದಗಳನ್ನು ಬಳಸುತ್ತಾರೆ. ಅದರ ಬದಲಾಗಿ ಮಹಾ ದಾಸೋಹಿ ಎಂಬ ಪದವನ್ನು ಬಳಸಬೇಕೆಂಬುದು ಶರಣರ ಆಶಯವಾಗಿದೆ.
ಈ ಸಂದರ್ಭದಲ್ಲಿ ಶಾಸಕ ಮಾಡಾಳು ವಿರೂಪಾಕ್ಷಪ್ಪ , ಜಿಲ್ಲಾ ಪಂಚಾಯಿತಿ ಸದಸ್ಯ ವಾಗೀಶ್, ತಿಪ್ಪೇಸ್ವಾಮಿ , ಉಮಾಪತಿ, ಮಾಜಿ ಶಾಸಕ ತಿಮ್ಮಪ್ಪ ಹೊಳಲ್ಕೆರೆ, ಜಗದೀಶ್ ಗೌಡ ಕೋಗಲೂರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.



