ದಾವಣಗೆರೆ: ರಾಜ್ಯದಲ್ಲಿ ತಾಲಿಬಾನ್ ಸರ್ಕಾರ ಆಡಳಿತ ನಡೆಸುತ್ತಿದೆ. ಮುಸ್ಲಿಂ ಸಮುದಾಯ ತುಷ್ಟೀಕರಣ ಹೆಚ್ಚಾಗುತ್ತಿದೆ. ಸುಪ್ರೀಂಕೋರ್ಟ್ ತೀರ್ಪಿನನ್ವಯ ರಾಮಮಂದಿರ ನಿರ್ಮಾಣ ಮಾಡಲಾಗಿದೆ. ಜನವರಿ 22ರಂದು ಮಂದಿರ ಉದ್ಘಾಟನೆ ನಡೆಯಲಿದೆ. ಇಡೀ ದೇಶದ ಜನ ಇದಕ್ಕಾಗಿ ಕಾಯುತ್ತಿದ್ದಾರೆ. ಆದ್ರೆ, ಸಿಎಂ ಸಿದ್ದರಾಮಯ್ಯ ಅವರು ಅಯೋಧ್ಯೆಯ ರಾಮಮಂದಿರ ಸ್ಥಳ ವಿವಾದ ಇನ್ನೂ ಇದೆ ಎಂದಿದ್ದಾರೆ. ಹಾಗದ್ರೆ ಸುಪ್ರೀಂ ಕೋರ್ಟ್ ಗಿಂತ ಸಿದ್ದರಾಮಯ್ಯ ದೊಡ್ಡವರಾ..?ರಾಮಭಕ್ತರು, ಹಿಂದೂಗಳನ್ನು ಕೆಣಕಿದರೆ ದಂಗೆ ಆಗುತ್ತೆ ಎಂದು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತವಿಲ್ಲ, ಟಿಪ್ಪು, ಘಜ್ನಿ ಮೊಹಮ್ಮದ್, ಬಾಬರ್, ಔರಂಗಜೇಬ್, ತಾಲಿಬಾನ್ ಆಡಳಿತ ಇದೆ. ಅಲ್ಪಸಂಖ್ಯಾತರ ತುಷ್ಟೀಕರಣ ಹೆಚ್ಚಾಗಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿಂದೂಗಳು ಮತ ಹಾಕಲ್ಲ ಎಂಬುದು ಗೊತ್ತಾಗಿದೆ. ಅದಕ್ಕಾಗಿ ಈ ರೀತಿ ಮಾತನಾಡುತ್ತಿದ್ದಾರೆ. ಹುಬ್ಬಳ್ಳಿಯ ಕರಸೇವಕ ಶ್ರೀಕಾಂತ್ ಪೂಜಾರಿ ಬಂಧಿಸಲಾಗಿದೆ. ಹಿಂದೂಗಳ ತಂಟೆಗೆ ಬಂದರೆ ಸುಮ್ಮನೆ ಇರಲ್ಲ. ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ವೇಳೆ ಗೋದ್ರಾ ಹತ್ಯಾಕಾಂಡ ನಡೆದಂತೆ ಮತ್ತೆ ಗಲಭೆ ಆಗುತ್ತದೆ ಎಂದಿರುವ ಬಿ. ಕೆ. ಹರಿಪ್ರಸಾದ್ ಅವರ ಹೇಳಿಕೆ ಗಮನಿಸಿದರೆ ಈ ದೇಶದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಲಾಗುತ್ತಿದೆ ಎಂಬುದು ಗೊತ್ತಾಗುತ್ತಿದೆ.
ರಾಮ ಮಂದಿರ ಉದ್ಘಾಟನೆಯನ್ನು ವಿಶ್ವ ಹಿಂದೂ ಪರಿಷತ್ ಸೇರಿ ವಿವಿಧ ಸಂಘಟನೆಗಳು ಆಯೋಜಿಸಿವೆ. ಬಿಜೆಪಿ ಆಯೋಜನೆ ಮಾಡಿಲ್ಲ. ಯಾವ ಮುಖ್ಯಮಂತ್ರಿಗಳನ್ನೂ ಕರೆದಿಲ್ಲ. ಸಿದ್ದರಾಮಯ್ಯ ಅವರನ್ನು ಯಾಕೆ ಕರೆಯಬೇಕು. ಕಾರ್ಯಕ್ರಮದ ಸಂಘಟಕರು ಆಹ್ವಾನ ನೀಡಿದವರು ಹೋಗುತ್ತಾರೆ ಎಂದು ತಿಳಿಸಿದರು.
ಈಗ ಸಿದ್ದರಾಮಯ್ಯ ಕೆಳಗಿಳಿಸಲು ಈ ರೀತಿಯ ತಂತ್ರ ನಡೆಸಲಾಗುತ್ತಿದೆ. ಹರಿಪ್ರಸಾದ್ ಸೈಡ್ ಲೈನ್ ಆಗಿದ್ದಾರೆ. ಸಚಿವ ಸ್ಥಾನ ಸಿಗಲಿಲ್ಲ ಎಂದು ಹತಾಶೆಗೊಂಡಿದ್ದಾರೆ.ಸಿದ್ದರಾಮಯ್ಯ ವಿರುದ್ಧ ದೂರು ನೀಡಿದ್ದಾರೆ. ಕಾಂಗ್ರೆಸ್ ಈಗ ಒಡೆದ ಮನೆಯಾಗಿದೆ.ದೇವಸ್ಥಾನಗಳ ಜೀರ್ಣೋದ್ಧಾರ, ರೈತರಿಗೆ ಬರ ಪರಿಹಾರ ನೀಡಲು ಸರ್ಕಾರದಲ್ಲಿ ಹಣ ಇಲ್ಲ. ಮುಸ್ಲಿಂ ಸಮುದಾಯಕ್ಕೆ ಹತ್ತು ಸಾವಿರ ಕೋಟಿ ರೂಪಾಯಿ ನೀಡುತ್ತೇವೆ, ಅಭಿವೃದ್ಧಿಗೆ 1 ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡುತ್ತೇವೆ ಎನ್ನುವ ಸಿದ್ದರಾಮಯ್ಯ ಅವರು ಯಾರ ಪರ ಆಡಳಿತ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು.
ಈ ಸಂದರ್ಭದಲ್ಲಿ ಟಿ. ಜಿ. ರವಿಕುಮಾರ್, ಮಹಾನಗರ ಪಾಲಿಕೆ ಮಾಜಿ ಮೇಯರ್ ಬಿ. ಜೆ. ಅಜಯ್ ಕುಮಾರ್, ಬಿಜೆಪಿ ಮುಖಂಡ ಕಲ್ಲಿಂಗಪ್ಪ, ತಂದೂರು ದಯಾನಂದ್, ಚಂದ್ರು, ಪ್ರತಾಪ್, ಚಂದ್ರು ಪಾಟೀಲ್, ಅಣಜಿ ಬಸವರಾಜ್ ಮತ್ತಿತರರು ಇದ್ದರು.



