ದಾವಣಗೆರೆ: ತಡ ರಾತ್ರಿ ರಸ್ತೆಯಲ್ಲಿ ನಿಂತಿದ್ದ ಯುವಕರಿಗೆ ಮನೆಗೆ ಹೋಗಿ ಎಂದಿದ್ದಕ್ಕೆ ಪೊಲೀಸ್ ಜತೆ ವಾಗ್ವಾದಕ್ಕಿಳಿದ ಕಾಂಗ್ರೆಸ್ ಮುಖಂಡ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ರಾತ್ರಿ ಗಸ್ತಿನಲ್ಲಿದ್ದ ಪೊಲೀಸರನ್ನು ನಿಂದಿಸಿ, ಕರ್ತವ್ಯಕ್ಕೆ ಅಡ್ಡಿ ಮಾಡಿದ ಆರೋಪದಡಿ ಕಾಂಗ್ರೆಸ್ ಮುಖಂಡ ಅಯೂಬ್ ಪೈಲ್ವಾನ್ ಸೇರಿದಂತೆ ನಾಲ್ವರು ಆರೋಪಿಗಳ ವಿರುದ್ಧ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಾಗ್ವಾದ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ನ.16ರ ರಾತ್ರಿ 11.45ರ ವೇಳೆ ಆಜಾದ್ ನಗರ ಠಾಣೆಯ ಪೊಲೀಸರು ಗಸ್ತು ನಡೆಸುತ್ತಿದ್ದ ವೇಳೆ ಮಾಗನಹಳ್ಳಿ ರಸ್ತೆಯ ಕ್ರೈಸ್ತರ ಸ್ಮಶಾನದ ಬಳಿಯ ರಸ್ತೆಯಲ್ಲಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್ ಅವರ ಪುತ್ರ ಹಸನ್ ರಸ್ತೆಯಲ್ಲಿ 4-5 ಯುವಕರೊಂದಿಗೆ ಬೈಕ್ ನಿಲ್ಲಿಸಿಕೊಂಡು ನಿಂತಿದ್ದರು. ಆಗ ಪೊಲೀಸರು ಮನೆಗೆ ಹೋಗಿ ಎಂದಿದ್ದಾರೆ. ಯುವಕರು ಹೋಗಲ್ಲ ಎಂದು ಪೊಲೀಸ್ ಕಾನ್ಸ್ಟೆಬಲ್ ಮೊಬೈಲ್ನಲ್ಲಿ ಫೋಟೊ ತೆಗೆದಿದ್ದಾರೆ. ಅದಕ್ಕೆ ವಿರೋಧ ವ್ಯಕ್ತಪಡಿಸಿದ ಹಸನ್ ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾನೆ.
ಸ್ಥಳಕ್ಕೆ ಆಜಾದ್ ನಗರ ಠಾಣೆ ಸಿಪಿಐ ಇಮ್ರಾನ್ ಪಾಷಾ ಬರುವಷ್ಟರಲ್ಲಿ ಕಾಂಗ್ರೆಸ್ ಮುಖಂಡ ಅಯೂಬ್ ಪೈಲ್ವಾನ್ ಹಾಗೂ ಸಹೋದರ ಸಾಕ್ ಪೈಲ್ವಾನ್ ಬಂದಿದ್ದರು. 11 ಗಂಟೆ ಬಳಿಕ ಯಾರೂ ಓಡಾಡಬಾರದು ಅಂತಾ ಯಾವ ಕಾನೂನಿನಲ್ಲಿದೆ ಎಂದು ಏಕವಚನದಲ್ಲಿ ಬೈದಿದ್ದಾರೆ. ಇದಲ್ಲದೆ, ಆಜಾದ್ ನಗರ ಠಾಣೆಯಲ್ಲಿ ನೀನು ಹೇಗೆ ಕೆಲಸ ಮಾಡ್ತಿರಾ ಎಂದು ಬೆದರಿಕೆ ಹಾಕಿದ್ಪೊದಾರೆಂದು ಪೊಲೀಸರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಯೂಬ್ ಪೈಲ್ವಾನ್, ಸಾಕ್ ಪೈಲ್ವಾನ್, ಅಯೂಬ್ ಪೈಲ್ವಾನ್ ಪುತ್ರರಾದ ಹಸನ್ ಹಾಗೂ ಹುಸೇನ್ ವಿರುದ್ಧ ಆಜಾದ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



