ಡಿವಿಜಿ ಸುದ್ದಿ, ದಾವಣಗೆರೆ: ಎಲ್ಲರು ಬೆಳಗ್ಗೆಯೇ ತಮ್ಮ ಕೆಲಸಕ್ಕೆ ಹೋಗುವ ಅವಸರದಲ್ಲಿದ್ದರು. ಆದರೆ, ಹೀಗೆ ಅವರಸರಲ್ಲಿದ್ದ ವಾಹನ ಸವಾರರು ನಗರದ ಜಯದೇವ ವೃತ್ತದಲ್ಲಿ ನಿಂತಿದ್ದ ಯಮ ಧರ್ಮರಾಯನನ್ನು ಕಂಡು ಶಾಕ್ ಆಗಿದ್ರು. ಯಮ ಧರ್ಮರಾಯನ ವೇಷ, ಭೂಷಣ ನೋಡಿದ ವಾಹನ ಸವಾರು ಅರೆ ಕ್ಷಣ ವಿಚಲಿತರಾದರು…

ರಸ್ತೆ ಸುರಕ್ಷತೆ ಸಪ್ತಾಹದ ಅಂಗವಾಗಿ ದಕ್ಷಿಣ ಸಂಚಾರ ಪೊಲೀಸ್ ಠಾಣೆ ವತಿಯಿಂದ ಸಾರ್ವಜನಿಕರಿಗೆ ಯಮ ಮತ್ತು ಕಿಂಕರ ವೇಷಧಾರಿಗಳ ಮೂಲಕ ಜಾಗೃತಿ ಮೂಡಿಸಲಾಯಿತು.`ಎಚ್ಚರಿಕೆ ರಸ್ತೆಗೆ ಇಳಿದ ಯಮ-ಕಿಂಕರರು ಇವರಿಂದ ಪಾರಾಗಲು ಸಂಚಾರ ನಿಯಮಗಳ ಪಾಲನೆಯೇ ಪರಿಹಾರ ಮಾರ್ಗ’ ಎಂಬ ಘೋಷವಾಕ್ಯದಡಿ ನಗರದ ಜಯದೇವ ವೃತ್ತ ಹಾಗೂ ಡೆಂಟಲ್ ಕಾಲೇಜು ರಸ್ತೆಯಲ್ಲಿಜಾಗೃತಿ ಮೂಡಿಸಿದರು.
ಟ್ರಾಫಿಕ್ ಪೊಲೀಸರು ಯಮ ಮತ್ತು ಕಿಂಕರ ವೇಷಧಾರಿಗಳಾಗಿ ವಾಹನ ಚಾಲಕರನ್ನು ನಿಲ್ಲಿಸಿ ನೀವು ಹೆಲ್ಮೆಟ್ ಧರಿಸಿಲ್ಲವೇಕೆ..? ವಾಹನದ ಚಾಲನೆ ವೇಳೆ ಮೊಬೈಲ್‍ನಲ್ಲಿ ಮಾತನಾಡುತ್ತೀರಾ? ಸರ್ಕಾರ ಹೆಚ್ಚು ದಂಡ ವಿಧಿಸಿದರೂ ಅಜಾಗರೂಕತೆಯಿಂದ ವಾಹನ ಚಾಲನೆ ಮಾಡುತ್ತೀರಾ..? ಇದರಿಂದ ಸಾವು ಸಂಭವಿಸುತ್ತದೆ. ನಿಮ್ಮನ್ನು ನಮ್ಮ ಯಮಲೋಕಕ್ಕೆ ಕರೆದುಕೊಂಡು ಹೋಗಿ ಘೋರ ಶಿಕ್ಷೆ ನೀಡುತ್ತೇವೆ. ಭೂಲೋಕದಲ್ಲಿ ಪೊಲೀಸರು ಎಷ್ಟೇ ಜಾಗೃತಿ ಮೂಡಿಸಿದರೂ ನೀವು ಪಾಲನೆ ಮಾಡುತ್ತಿಲ್ಲ ಎಂದು ವಾಹನ ಸವಾರಿಗೆ ಅರಿವು ಮೂಡಿಸಿದರು.
ಈ ವೇಳೆ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯ ಪಿಎಸ್‍ಐ ಗಳಾದ ಮಂಜುನಾಥ್ ಲಿಂಗಾರೆಡ್ಡಿ, ಎಎಸ್‍ಐ ಜಯಶೀಲ, ಟ್ರಾಫಿಕ್ ಪೊಲೀಸ್ ಸಿಬ್ಬಂದಿಗಳು ಭಾಗಿಯಾಗಿದ್ದರು.



