ಡಿವಿಜಿ ಸುದ್ದಿ, ಬೆಳಗಾವಿ: ಬೆಳಗಾವಿ ಗಡಿ ವಿವಾದಕ್ಕೆ ಬೆಂಕಿ ಹಚ್ಚುವ ಕೆಲಸವನ್ನು ಶಿವಸೇನೆ ಮುಖಂಡರು ಎಂಇಎಸ್ ಮೂಲಕ ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ. ಸೇನೆ ನಾಯಕರಿಗೆ ಬೆಳಗಾವಿಯಲ್ಲಿ ಖ್ಯಾತೆ ತಗೆಯುವುದು ಕಾಮನ್ ಆಗ್ಬಿಟ್ಟಿದೆ.
ಹುತಾತ್ಮರ ಕಾರ್ಯಕ್ರಮ ನೆಪದಲ್ಲಿ ಶಾಂತವಾಗಿದ್ದ ಬೆಳಗಾವಿಯಲ್ಲಿ ಅಶಾಂತಿ ಉಂಟಾಗುವ ಸಾಧ್ಯತೆ ಇದೆ ಎನ್ನುವ ಕಾರಣಕ್ಕೆ ಮುಂಜಾಗೃತ ಕ್ರಮವಾಗಿ ಮಹಾರಾಷ್ಟ್ರ ಸಚಿವ ರಾಜೇಂದ್ರ ಪಾಟೀಲ ಅವರನ್ನು ಕರ್ನಾಟಕದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಜ್ಯ ಪೊಲೀಸರ ಈ ಕ್ರಮವನ್ನು ಶಿವಸೇನೆ ವಕ್ತಾರ, ರಾಜ್ಯದ ರಾಜ್ಯಸಭಾ ಸದಸ್ಯ ಸಂಜಯ್ ರಾವುತ್ ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಕರ್ನಾಟಕ ಪೊಲೀಸರು ರಾಜೇಂದ್ರ ಅವರ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ. ತಳ್ಳಾಡಿದ್ದಾರೆ. ಹುತಾತ್ಮರ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಅವರನ್ನು ತಡೆಯಲಾಗಿದೆ. ಮಹಾರಾಷ್ಟ್ರ ಬಿಜೆಪಿ ಘಟಕಕ್ಕೆ ಇದನ್ನು ಖಂಡಿಸುವ ಧೈರ್ಯವಿದೆಯೇ? ಜನವರಿ 18 ರಂದು ಬೆಳಗಾವಿಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಹೋಗುತ್ತೇನೆ. ಏನಾಗುತ್ತದೆಯೋ ನೋಡೋಣ ಎಂದು ಸವಾಲು ಹಾಕಿದ್ದಾರೆ.



