ದಾವಣಗೆರೆ: ಮಹಾ ಶಿವರಾತ್ರಿ ಅಂಗವಾಗಿ ನಗರದೆಲ್ಲಡೆ ಭಕ್ತಿಯಿಂದ ಶಿವ ಸ್ಮರಣೆ ನಡೆಯಿತು. ಶಿವಾಲಯಗಳಲ್ಲಿ ವಿಶೇಷ ಅಭಿಷೇಕ, ಅಲಂಕಾರ, ಮಹಾಮಂಗಳಾರತಿ, ಬಿಲ್ವಪತ್ರೆ ಅರ್ಚನೆ,ಜಲಾಭಿಷೇಕ, ಹಾಲಿನ ಅಭಿಷೇಕಾದಿ ಧಾರ್ಮಿಕ ಕಾರ್ಯಗಳುಶ್ರ ದ್ಧಾಭಕ್ತಿಯಿಂದ ನಡೆದವು. ನಗರದ ಸ್ವಾಮಿ ವಿವೇಕಾನಂದ ಬಡಾವಣೆಯ ಶಿವ ಧ್ಯಾನ ಮಂದಿರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು, ಶಿವನ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ರಾತ್ರಿ 8 ಗಂಟೆಯಿಂದ ಖ್ಯಾತ ಹಿಂದುಸ್ತಾನಿ ಗಾಯಕಿ ಸಂಗೀತಾ ಕಟ್ಟಿ ಕುಲಕರ್ಣಿ ಅವರಿಂದ ಭಕ್ತಿ-ಮಂಜರಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಇದಲ್ಲದೆ ಸೋಗೇರ ಪೇಟೆಯ ಶ್ರೀ ಪಾತಾಳ ಲಿಂಗೇಶ್ವರ ದೇವಸ್ಥಾನ,ವಿನೋಬ ನಗರ ಶಂಭುಲಿಂಗೇಶ್ವರ ದೇವಸ್ಥಾನ, ಕೆಟಿಜೆ ನಗರ ಶ್ರೀ ನೀಲಕಂಠೇಶ್ವರ ದೇವಸ್ಥಾನ, ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ, ವಿದ್ಯಾನಗರ ಶಿವಪಾರ್ವತಿ ದೇವಸ್ಥಾನ, ಶ್ರೀ ಕನ್ನಿಕಾ ಪರಮೇಶ್ವರಿ ರಸ್ತೆಯ ಶ್ರೀ ಮಾರ್ಕಂಡೇಶ್ವರ ದೇವಳ, ಗೀತಾಂಜಲಿ
ಚಿತ್ರ ಮಂದಿರ ಪಕ್ಕದ ಶ್ರೀ ಲಿಂಗೇಶ್ವರ ದೇವಸ್ಥಾನ, ಮಹಾರಾಜ ಪೇಟೆ, ವಿಠಲ ಮಂದಿರ, ಹಳೆ ಬೇತೂರು ರಸ್ತೆಯ ಶ್ರೀ ಮಲ್ಲಿಕಾರ್ಜುನ ದೇಗುಲ ಸೇರಿದಂತೆ ವಿವಿಧ ಮಂದಿರಗಳಲ್ಲಿ ಅಭಿಷೇಕ, ಪೂಜೆ, ಅಲಂಕಾರ, ಮಹಾ ಮಂಗಳಾರತಿ ನಡೆದವು. ಶಾಸಕ ಶಾಮನೂರು ಶಿವಶಂಕರಪ್ಪ ಅವರು ಸ್ವಗೃಹದಲ್ಲಿ ಇಷ್ಟ ಲಿಂಗ ಪೂಜೆ, ಶಿವ ಪೂಜೆ ಸಲ್ಲಿಸಿದರು. ಜತೆಗೆ ಸಮಸ್ತ ನಾಡಿನ ಜನತೆಗೆ ಶಿವನು ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿಯನ್ನು ನೀಡಲಿ ಎಂದು ಶಿವರಾತ್ರಿ ಹಬ್ಬದ ಶುಭಾಶಯ ತಿಳಿಸಿದ್ದಾರೆ.
ಎಲ್ಲಾ ದೇವಸ್ಥಾನಗಳಲ್ಲಿ ರುದ್ರಾಭಿಷೇಕ, ಎಳನೀರು, ಜಲಾಭಿಷೇಕ, ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ, ಬಿಲ್ವಪತ್ರೆ ಸಮರ್ಪಣೆ, ವಿವಿಧ ಹೂವುಗಳ ಅಲಂಕಾರ ನಡೆಯಿತು. ಶಂಖ, ಗಂಟೆ, ಸಮಾಳದ ನಾದ ಮೊಳಗಿತು. ಭಕ್ತರು ಕುಟುಂಬ ಸಮೇತರಾಗಿ ಶಿವನ ದರ್ಶನಕ್ಕಾಗಿ ಕಾದು ನಿಂತಿದ್ದರು. ಭಕ್ತರು ಶಿವನಿಗೆ ಪ್ರಿಯವಾದ ಬಿಲ್ವಪತ್ರೆ, ತುಂಬೆ ಹೂವುಗಳನ್ನು ಅರ್ಪಿಸಿದರು. ಹಣ್ಣು ಹಂಪಲು, ಲಘು ಉಪಹಾರವನ್ನು ಶಿವನಿಗೆ ನೈವೇದ್ಯ ಮಾಡಿದ ನಂತರ ಮನೆ ಮಂದಿ ಹಣ್ಣು ಹಂಪಲು ಸೇವಿಸಿ, ಲಘು ಉಪಹಾರ ಸೇವಿಸಿದರು.