ದಾವಣಗೆರೆ; ರೈತರ ಹೆಸರಿನಲ್ಲಿ ವಿಶೇಷ ಬಜೆಟ್, ಹಸಿರು ಶಾಲು ಹಾಕಿಕೊಂಡು ಪ್ರಮಾಣವಚನ ಸ್ವೀಕಾರ, ರೈತನೇ ಅನ್ನದಾತ, ರೈತರೇ ದೇಶದ ಬೆನ್ನೆಲುಬು, ರೈತರಿಗೆ ಬೆಳೆ ಬೆಳೆಯಲು ನಿರಂತರ ವಿದ್ಯುತ್
ಎಂದು ಬಡಾಯಿ ಕೊಚ್ಚಿಕೊಳ್ಳುವ ನಮ್ಮ ಬಿಜೆಪಿ ಸರ್ಕಾರ… ರೈತರಿಗೆ ಈಗ ನೀಡುತ್ತಿರುವ ದಿನಕ್ಕೆ 6 ಗಂಟೆ ವಿದ್ಯುತ್ ಅನ್ನು ಸಹ ಸರಿಯಾಗಿ ನೀಡದೆ ಅದನ್ನು ಸಹ ಎರಡು ಕಂತುಗಳಲ್ಲಿ ಅಂದರೆ ಪ್ರತಿದಿನ 3 ಗಂಟೆ ಯಂತೆ ಎರಡು ಬಾರಿ ನೀಡುವ ಮೂಲಕ ಸರ್ಕಾರ ರೈತರ ಕುತ್ತಿಗೆ ಹಿಸುಕುವ ಕೆಲಸ ಮಾಡಿಸುತ್ತಿದೆ ಎಂದು ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಕೆ.ಎಲ್.ಹರೀಶ್ ಬಸಾಪುರ ಕಿಡಿಕಾರಿದ್ದಾರೆ.
ಉದ್ಯಮಿಗಳಿಗೆ, ಕೈಗಾರಿಕೆಗಳಿಗೆ, ಇನ್ನಿತರ ಸಿರಿವಂತರಿಗೆ ದಿನದ 24 ಗಂಟೆ ವಿದ್ಯುತ್ ಕಲ್ಪಿಸುವ ಸರ್ಕಾರ, ದೇಶಕ್ಕೆ ಅನ್ನ ನೀಡುವ ರೈತನಿಗೆ ಮಾತ್ರ ದಿನಕ್ಕೆ 6 ಗಂಟೆ ವಿದ್ಯುತ್ ನೀಡುತಿತ್ತು ಆದರೆ ಈಗ ಅದನ್ನು ಸಹ ಎರಡು ಕಂತುಗಳಲ್ಲಿ ಅಂದರೆ ಬೆಳಗ್ಗೆ 3 ಗಂಟೆಯಿಂದ 6 ಗಂಟೆವರೆಗೆ ನಂತರ ಬೆಳಗ್ಗೆ 9 ಗಂಟೆಯಿಂದ 12 ಗಂಟೆಯವರೆಗೆ ನೀಡುತ್ತಿದ್ದು, ಇದರಿಂದ ರೈತರು ತಮ್ಮ ಹೊಲಗಳಿಗೆ ನೀರು ಹಾಯಿಸಿಕೊಳ್ಳಲು ಸಾಧ್ಯವಾಗದೆ ಸರ್ಕಾರಕ್ಕೆ ಇಡೀ ಶಾಪ ಹಾಕುತ್ತಿದ್ದಾರೆ.
ಒಮ್ಮೆಗೆ 3 ಗಂಟೆ ವಿದ್ಯುತ್ ನೀಡಿದರೆ ರೈತರಿಗೆ ಅನಾನುಕೂಲವಾಗುತ್ತದೆ, ಸತತ 6 ಗಂಟೆಯಾದರೂ ವಿದ್ಯುತ್ ನೀಡಿದರೆ ಹೊಲಗಳಿಗೆ ನೀರು ಹಾಯಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದು ಸಂಬಂಧಪಟ್ಟ ಬೆಸ್ಕಾಂ ಅಧಿಕಾರಿಗಳಿಗೆ, ಸಂಪರ್ಕಿಸಿ ವಿನಂತಿಸಿದರೆ ಅವರ ಉತ್ತರ ಮತ್ತದೇ ಮೇಲಾಧಿಕಾರಿಗಳು ಹಾಗೂ ಸರ್ಕಾರದ ಕಡೆಗೆ.
ಇನ್ನು ಪ್ರವಾಸಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ರವರ ಗಮನಕ್ಕದರೂ ತರೋಣವೆಂದರೆ, ತಿಂಗಳಿಗೊಮ್ಮೆ ಬರುವ ಇವರು ಜಿ.ಎಂ ಗೆಸ್ಟ್ ಹೌಸ್ ಬಿಟ್ಟು ಸಾರ್ವಜನಿಕರ ಸಮಸ್ಯೆಯಾದರೂ ಕೇಳುವ ದಿನ ಬೇಗ ಬರಲಿ ಎಂದು ಬೇಸರ ವ್ಯಕ್ತಪಡಿಸಿದರು.



