ದಾವಣಗೆರೆ: ಡಿ.24 ರಿಂದ 26ರ ವರೆಗೆ ನಗರದ ಎಂಬಿಎ ಕಾಲೇಜು ಮೈದಾನದಲ್ಲಿ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ 23ನೇ ಮಹಾ ಅಧಿವೇಶನ ನಡೆಯಲಿದೆ ಎಂದು ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಶಾಮನೂರು ಶಿವಶಂಕರಪ್ಪ, ಪ್ರಧಾನ ಕಾರ್ಯದರ್ಶಿ ಈಶ್ವರ್ ಖಂಡ್ರೆ ಹೇಳಿದರು.
ನಗರದ ಎಂಬಿಎ ಕಾಲೇಜು ಮೈದಾನದಲ್ಲಿ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ 23ನೇ ಮಹಾ ಅಧಿವೇಶನದ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿವೇಶನ ಉದ್ಘಾಟಿಸುವರು. ಎರಡನೇ ದಿನ ಮಹಿಳಾ ಸಮಾವೇಶ, ಯುವ ಸಮಾವೇಶ ನಡೆಯಲಿವೆ. ಮೂರನೇ ದಿನ ಧಾರ್ಮಿಕ ಸಮಾರಂಭ ಹಮ್ಮಿಕೊಳ್ಳಲಾಗಿದ್ದು, ನಾಡಿನ ವಿವಿಧ ಮಠಾಧೀಶರು, ಮಾಜಿ ಸಿಎಂ ಯಡಿಯೂರಪ್ಪ ಪಾಲ್ಗೊಳ್ಳುವರು. ಈ ವೇಳೆ ವಿವಿಧ ವಿಷಯಗಳ ಚರ್ಚಾ ಗೋಷ್ಠಿ, ಕೃಷಿ ಮೇಳ, ಉದ್ಯಮ ಮೇಳ ಸದ್ಭಾವನ ಸಮಾವೇಶ, ಕವಿಗೋಷ್ಠಿ, ವಸ್ತು ಪ್ರದರ್ಶನ ಹೀಗೆ ಅನೇಕ ಕಾರ್ಯಕ್ರಮ ನಡೆಯಲಿವೆ ಎಂದರು.
1904 ಸ್ಥಾಪನೆಯಾದ ಮಹಾಸಭಾಕ್ಕೆ 118 ವರ್ಷಗಳ ಇತಿಹಾಸ ಇದೆ. ಇಲ್ಲಿವರೆಗೆ 22 ಅಧಿವೇಶಗಳಾಗಿವೆ. 1917 ರಲ್ಲಿ ದಾವಣಗೆರೆಯಲ್ಲಿ ಅಧಿವೇಶನ ನಡೆದಿತ್ತು. ಇದಾದ ಬಳಿಕೆ ಎರಡನೇ ಅಧಿವೇಶನ ಇದಾಗಿದೆ.ಅಧಿವೇಶನಕ್ಕ ಒಂದು ಲಕ್ಷ ಜನರು ಆಗಮಿಸುವ ನಿರೀಕ್ಷೆಯಿದ್ದು, ಅವರಿಗೆ ಮೂರು ದಿನಗಳ ಕಾಲ ವಸತಿ, ಊಟ, ತಿಂಡಿಯ ವ್ಯವಸ್ಥೆ ಮಾಡಲಾಗುವುದು. ಎಲ್ಲ ಉಪ ಪಂಗಡಗಳೂ ಒಂದಾಗಬೇಕು ಎಂಬುದು ನಮ್ಮ ಆಶಯ. ಆಗ ಸಮಾಜದ ಜನಸಂಖ್ಯೆ 2 ಕೋಟಿಯನ್ನು ದಾಟುತ್ತದೆ. ವೀರಶೈವ ಲಿಂಗಾಯತ ಸಮಾಜಕ್ಕೆ ಕೇಂದ್ರ ಸರ್ಕಾರದಿಂದ ಒಬಿಸಿ ಮೀಸಲಾತಿ, ರಾಜ್ಯ ಸರ್ಕಾರದಿಂದ ಉಪ ಪಂಗಡಗಳಿಗೆ ಮೀಸಲಾತಿ ಸಿಗಬೇಕು. ಈ ಕುರಿತು ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮಹಾಸಭಾ ಜಿಲ್ಲಾಧ್ಯಕ್ಷ ದೇವರಮನೆ ಶಿವಕುಮಾರ್ , ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಎ.ಎಸ್. ವೀರಣ್ಣ, ಪ್ರಭಾಕರ ಕೋರೆ ಅಣಬೇರು ರಾಜಣ್ಣ ಸೇರಿದಂತೆ ಮತ್ತಿತರರು ಇದ್ದರು.



