ದಾವಣಗೆರೆ: ನಗರದ ಕೇಂದ್ರ ಸ್ಥಾನದಲ್ಲಿರುವ ಖಾಸಗಿ ಬಸ್ ನಿಲ್ದಾಣಕ್ಕೆ ಹೆಸರಿಡುವ ವಿಚಾರದಲ್ಲಿ ಕಾಂಗ್ರೆಸ್- ಬಿಜೆಪಿ ನಡುವೆ ರಾಜಕೀಯ ಜಿದ್ದಾಜಿದ್ದು ಶುರುವಾಗಿದೆ.
28.67 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಖಾಸಗಿ ಬಸ್ ನಿಲ್ದಾಣಕ್ಕೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೆಸರಿಡಲು ಮಹಾನಗರ ಪಾಲಿಕೆ ಆಡಳಿತ ಪಕ್ಷ ಬಿಜೆಪಿ ಈಗಾಗಲೇ ನಿರ್ಧರಿಸಿದೆ. ಈ ನಿರ್ಧಾರವನ್ನು ಕಾಂಗ್ರೆಸ್ ವಿರೋಧಿಸಿದೆ. 2004 ರಲ್ಲಿ ಕಾಂಗ್ರೆಸ್ ಪಾಲಿಕೆ ಅಧಿಕಾರದಲ್ಲಿದ್ದಾಗ ಖಾಸಗಿ ಬಸ್ ನಿಲ್ದಾಣಕ್ಕೆ ಕಾಂಗ್ರೆಸ್ ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರ ಹೆಸರಿಡಲಾಗಿತ್ತು. ಇದೀಗ ಏಕಾಏಕಿ ಬದಲಿಸಲು ಹೊರಟಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.
ಬಸ್ ನಿಲ್ದಾಣಕ್ಕೆ ಭಾರತ ರತ್ನ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೆಸರಿಡಲು ನಿರ್ಧರಿಸಲಾಗಿದೆ. ಈ ಬಗ್ಗೆ ಸ್ಥಾಯಿ ಸಮಿತಿ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಬಿಜೆಪಿ, ಕಾಂಗ್ರೆಸ್ ಎರಡು ಪಕ್ಷಗಳು ಹೆಸರರುಡುವ ವಿಚಾರದಲ್ಲಿನ ರಾಜಕೀಯ ನೋಡಿದ ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ನಿಸ್ವಾರ್ಥ ಕೊಡುಗೈ ದಾನಿಗಳಾದ ರಾಜನಹಳ್ಳಿ ಹನುಮಂತಪ್ಪ, ಚಿಗಟೇರಿ, ಚನ್ನಗಿರಿ ಫ್ಯಾಮಿಲಿಗಳ ಹೆಸರು ನಾಮಕರಣ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.



