ದಾವಣಗೆರೆ: ಸಸ್ಯ ಸಂಕುಲದಲ್ಲಿ ಕಲ್ಪವೃಕ್ಷವೆನಿಸಿರುವ ತೆಂಗಿನ ಬೆಳೆಯ ವಿಸ್ತೀರ್ಣ ಕುಸಿಯುತ್ತಿರುವುದು ವಿಶಾದನೀಯುವೆಂದು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಬಸವನಗೌಡ ಎಂ.ಜಿ ಆತಂಕ ವ್ಯಕ್ತಪಡಿಸಿದರು.
ದಾವಣಗೆರೆ ತಾಲ್ಲೂಕು ಬಸವನಹಾಳ್ ಗ್ರಾಮದಲ್ಲಿ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ಬೇತೂರು ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿ ಹಾಗೂ ತೆಂಗು ಅಭಿವೃದ್ಧಿ ಮಂಡಳಿ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ತೆಂಗು ಬೆಳೆ ಕ್ಷೇತ್ರೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಅಡಿಕೆ ಬೆಳೆ ವಿಸ್ತೀರ್ಣ ಜಿಲ್ಲೆಯಲ್ಲಿ ಹೆಚ್ಚಾಗುತ್ತಿದ್ದು, ಜನರು ತೆಂಗಿನ ಬಗ್ಗೆ ಒಲವು ಕಳೆದುಕೊಳ್ಳ್ಳುತ್ತಿದ್ದಾರೆ. ಉತ್ತಮ ಗುಣಮಟ್ಟದ ತೆಂಗಿನ ಕಾಯಿಯ ಉತ್ಪಾದನೆ ಈಗ ಸವಾಲಾಗಿದೆ. ಸಮಗ್ರ ಪೋಷಕಾಂಶ ನಿರ್ವಹಣೆ, ರೋಗ ಮತ್ತು ಕೀಟಗಳ ನಿರ್ವಹಣೆಯಿಂದ ಗುಣಮಟ್ಟದ ಇಳುವರಿಯನ್ನು ಪಡೆಯಲು ಸಾಧ್ಯ ಎಂದರು. ತೆಂಗಿನ ಕಾಯಿಯಿಂದ ಎಳನೀರು, ಕೊಬ್ಬರಿ, ಚಿಪ್ಸ್, ವರ್ಜಿಸ್ ಎಣ್ಣೆ, ಬರ್ಫಿ, ಇದ್ದಿಲು ಮುಂತಾದ ಉಪ ಉತ್ಪನ್ನಗಳನ್ನು ಮಾಡಬಹುದಾಗಿದೆ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ ಎಂದು ತಿಳಿಸಿದರು.
ಕೇಂದ್ರದ ಮಣ್ಣು ವಿಜ್ಞಾನಿ ಸಣ್ಣಗೌಡ್ರ ಹೆಚ್. ಎಂ. ಮಾತನಾಡಿ ಪ್ರಸ್ತುತ ಕೀಟದ ಬೆಳೆಯಲ್ಲಿ ಈಗ ಹಸಿರೆಲೆ ಗೊಬ್ಬರವಾಗಿ ಸೆಣಬು, ಡಯಾಂಚ, ಅವರೆ, ಅಲಸಂದೆಗಳನ್ನು ಬೆಳೆದು ಮಣ್ಣಿನ ಫಲವತ್ತತೆಯನ್ನು ವೃದ್ಧಿಸಿಕೊಳ್ಳಬಹುದೆಂದರು.
ಸಸ್ಯ ಸಂರಕ್ಷಣಾ ತಜ್ಞ ಡಾ. ಅವಿನಾಶ್ ಟಿ.ಜಿ. ಯವರು ತೆಂಗಿಗೆ ಬರುವ ವಿವಿಧ ರೋಗ ಮತ್ತು ಕೀಟಗಳ ಸಮಗ್ರ ನಿರ್ವಹಣೆ ಕುರಿತು ಮಾಹಿತಿ ನೀಡಿದರು. ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ಉಮೇಶ್, ಉಪಾಧ್ಯಕ್ಷ ಸತೀಶ್, ನಿರ್ದೇಶಕ ಬಸವರಾಜ, ವಿಜಯಕುಮಾರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಅಧಿಕಾರಿಗಳಾದ ಶ್ರೀ ಆಕಾಶ್, ಶ್ರೀ ದರ್ಶನ, ಸಮಾರು 70 ಕ್ಕೂ ಹೆಚ್ಚು ರೈತ ಭಾಂದವರು ಭಾಗವಹಿಸಿ ಮಾಹಿತಿ ನೀಡಿದರು.



