ದಾವಣಗೆರೆ: ಹರಿಹರ ತಾಲ್ಲೂಕಿನ ಮಿಟ್ಲಕಟ್ಟೆ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿನ ಅಕ್ರಮದ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಿದ್ದರೆ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನಿನ್ನೆ ಡಿಸಿ ಕಚೇರಿ ಮುಂದೆ ಎಚ್ಚರಿಕೆ ನೀಡಿದ್ದ ಪರಿಸರ ಪ್ರೇಮಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಲು ಮರದ ವೀರಚಾರಿ, ತಡ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೀರಚಾರಿ ಆತ್ಮಹತ್ಯೆಗೆ ಪರಿಸರ ಪ್ರೇಮಿಗಳು ಕಂಬನಿ ಮಿಡಿದಿದ್ದಾರೆ.
ಇಂದು ಗ್ರಾಮಸ್ಥರು ನ್ಯಾಯಬೆಲೆ ಅಂಗಡಿ ಲೈಸೆನ್ಸ್ ರದ್ದುಪಡಿಸಬೇಕು ಹಾಗೂ ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಶವದ ಮುಂದೆ ಪ್ರತಿಭಟನೆ ನಡೆಸಿದರು. ವೀರಾಚಾರಿ ಅವರ ಮಕ್ಕಳಿಗೆ ಪರಿಹಾರ ನೀಡಬೇಕು. ಅವರ ಕಾರಣರಾದ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದರು. ಸ್ಥಳಕ್ಕೆ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಉಪವಿಭಾಗಾಧಿಕಾರಿ ದುರ್ಗಾಶ್ರೀ, ಹರಿಹರ ತಹಶೀಲ್ದಾರ್ ಅಶ್ವತ್ಥ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಆಹಾರ ಪದಾರ್ಥಗಳನ್ನು ಅಕ್ರಮ ಮಾರಾಟ ವಿರುದ್ಧ ಹಲವು ಸಲ ಧ್ವನಿ ಎತ್ತಿದ್ದ ವೀರಾಚಾರಿ, ನ್ಯಾಯ ಬೆಲೆ ಅಂಗಡಿಯ ಲೈಸೆನ್ಸ್ ಅನ್ನು ರದ್ದುಪಡಿಸುವಂತೆ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ನ್ಯಾಯ ಸಿಗದೇ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಿಟ್ಲಕಟ್ಟೆ ಗ್ರಾಮಸ್ಥರ ಬಳಿ ಹೇಳಿದ್ದರು.
ಚಿತ್ರದುರ್ಗದ ನಂದೀಹಳ್ಳಿಯಲ್ಲಿ 1983ರಲ್ಲಿ ಹುಟ್ಟಿದ ವೀರಚಾರಿ ಅವರು ಹರಿಹರ ತಾಲ್ಲೂಕಿನ ಮಿಟ್ಲಕಟ್ಟೆಗೆ ಬಂದು ನೆಲೆಸಿದರು. ಹೊಟ್ಟೆಪಾಡಿಗಾಗಿ ಕುಲುಮೆ ಕೆಲಸ ಮಾಡಿದರೂ ಪರಿಸರ ಸಂರಕ್ಷಣೆಯಲ್ಲಿ ಗುರುತಿಸಿಕೊಂಡಿದ್ದರು.



