ದಾವಣಗೆರೆ: ಹಳೇ- ಹೊಸ ದಾವಣಗೆರೆ ಸಂಪರ್ಕ ಕೊಂಡಿಯಾಗಿದ್ದ ಅಶೋಕ ಚಿತ್ರಮಂದಿರ ಬಳಿಯ ರೈಲ್ವೆ ಗೇಟ್ ಟ್ರಾಫಿಕ್ ಜಾಮ್ ಸಮಸ್ಯಗೆ ಕೊನೆಗೂ ಪರಿಹಾರ ಸಿಗುವ ಕಾಲ ಸನಿಹವಾಗಿದೆ. ಭಾನುವಾರ ಸತತ 10 ತಾಸು ಅಂಡರ್ ಪಾಸ್ ಕಾಮಗಾರಿಗೆ ನಡೆಸಲಾಗಿದೆ.ರೈಲ್ವೆ ಹಳಿಯ ಅಡಿಯಲ್ಲಿ ಈಗಾಗಲೇ ಸಿದ್ಧವಿದ್ದ ಸಿಮೆಂಟ್ ಬಾಕ್ಸ್ ಅಳವಡಿಕೆ ಕಾರ್ಯ ಒಂದೇ ದಿನದಲ್ಲಿ ಮುಗಿಸಲಾಗಿದೆ. ಆದರೆ, ರಸ್ತೆ ಕಾಮಗಾರಿ ಮುಗಿಯಲು ಇನ್ನೂ ಒಂದೂವರೆ ತಿಂಗಳು ಬೇಕಾಗುತ್ತದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
10 ಗಂಟೆಗಳ ಕಾಲ ರೈಲು ಸಂಚಾರ ಸ್ಥಗಿತಗೊಳಿಸಿ ರೈಲ್ವೆ ಕೆಳಸೇತುವೆ ಕಾಮಗಾರಿಯನ್ನು ಭಾನುವಾರ ಯಶಸ್ವಿಯಾಗಿ ನಡೆಸಲಾಗಿದ್ದು, ಮೊದಲೇ ತಯಾರಿಸಿ ಇಟ್ಟಿದ್ದ ಸಿಮೆಂಟ್ ಬಾಕ್ಸ್‌ಗಳನ್ನು ಅಳವಡಿಸಲಾಗಿದೆ.
ಸದಾ ಟ್ರಾಫಿಕ್ ಜಾಮ್ ಆಗುವ ಅಶೋಕ ರಸ್ತೆ ರೈಲ್ವೆ ಗೇಟ್ ಸಾರ್ವಜನಿಕರಿಗರ ದಶಕಗಳ ಸಮಸ್ಯೆಯಾಗಿತ್ತು. ಮೇಲ್ಸೇತುವೆ ನಿರ್ಮಿಸಲು ಖಾಸಗಿ ಜಮೀನು ಮಾಲೀಕರು ಜಮೀನು ಬಿಟ್ಟುಕೊಡಲು ತಯಾರು ಇರಲಿಲ್ಲ. ಹಾಗಾಗಿ ಅಶೋಕ ರಸ್ತೆ ಸಮಸ್ಯೆ ಪರಿಹಾರಗೊಂಡಿರಲಿಲ್ಲ. ಕೊನೆಗೆ ಸ್ವಲ್ಪ ಜಮೀನು ಪಡೆದು ಕೆಳಸೇತುವೆ ನಿರ್ಮಿಸಲು ನಿರ್ಧರಿಸಲಾಗಿತ್ತು.
ಹಳಿಯ ಭಾಗ ಹೊರತುಪಡಿಸಿ ಉಳಿದ ಕೆಲಸ ಮುಂಚೆಯೇ ಮಾಡಲಾಗಿತ್ತು. ರಾತ್ರಿ ಮಳೆ ಸುರಿಯುತ್ತಿದ್ದರೂ ಕೆಲಸ ಮುಂದುವರಿಸಲಾಗಿತ್ತು. ಭಾನುವಾರ ಇಂಟರ್‌ಸಿಟಿ ಸಹಿತ ಲೋಕಲ್ ರೈಲುಗಳನ್ನು ರದ್ದುಗೊಳಿಸಲಾಗಿತ್ತು. ಸತತ 10 ಗಂಟೆಯಲ್ಲಿ ಕೆಲಸಮುಗಿಸಲಾಗಿದೆ. ಕಾಮಗಾರಿಯಿಂದ ಒಟ್ಟು 12 ರೈಲುಗಳ ಸಂಚಾರ ವ್ಯತ್ಯಯವಾಯಿತು.
ಮೈಸೂರು ವಿಭಾಗದ ಹಿರಿಯ ಅಧಿಕಾರಿ ರೋಹನ್ ಗೊಂಗ್ರೆ, ಹುಬ್ಬಳ್ಳಿ ವಿಭಾಗದ ಟ್ರ್ಯಾಕ್ ಮಿಷನ್ ಚೀಫ್ ಎಂಜಿನಿಯರ್ ಮುರುಳಿಕೃಷ್ಣ, ಸಿಇ ಬೋಷನ್ ಸೇರಿದಂತೆ 15ಕ್ಕೂ ಹೆಚ್ಚು ಅಧಿಕಾರಿಗಳು ಕಾಮಗಾರಿ ಸ್ಥಳದಲ್ಲಿ ಮೊಕ್ಕಂ ಹೂಡಿದ್ದರು. 100 ಜನ ಕೆಲಸಗಾರರು ಕೆಳ ಸೇತುವೆ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದರು.ಆಂಧ್ರದಿಂದ 700 ಕೆ.ಜಿ. ತೂಕದ ಕ್ರೈನ್, 250 ಕೆ.ಜಿ. ತೂಕದ ಕ್ರೇನ್ ತರಿಸಲಾಗಿತ್ತು. ನಾಲ್ಕು ಹಿಟಾಚಿ, 6 ಟಿಪ್ಪರ್ ಬಳಸಲಬಳಸಲಾಗಿತ್ತು.
ಕೆಳ ಸೇತುವೆಗಾಗಿ 35 ಕೋಟಿ ಅನುದಾನವನ್ನು ಬಜೆಟ್‌ನಲ್ಲಿ ನೀಡಲಾಗಿತ್ತು. ಅಶೋಕ ರಸ್ತೆಯ ಈ ಸಮಸ್ಯೆಯನ್ನು ಪರಿಹರಿಸುವುದಾಗಿ ಭರವಸೆ ನೀಡಿದ್ದ ಸಂಸದ ಜಿ.ಎಂ. ಸಿದ್ದೇಶ್ವರ ಅವರಿಗೆ ಸವಾಲಾಗಿತ್ತು. ಆಗಿನ ಕೇಂದ್ರ ರೈಲ್ವೆ ರಾಜ್ಯ ಸಚಿವರಾಗಿದ್ದ ಸುರೇಶ ಅಂಗಡಿ ಅವರನ್ನು ಕರೆಸಿ ಪರಿಶೀಲನೆ ಮಾಡಿಸಿದ್ದರು. ಅಶೋಕ ರಸ್ತೆ ಸಮಸ್ಯೆಗೆ ಪರಿಹಾರ ಸಿಗುವ ಕಾಲ ಹತ್ತಿರ ಬಂದಿದೆ. ಅಶೋಕ ಚಿತ್ರಮಂದಿರ ಬಳಿ ರೈಲ್ವೆ ಗೇಟ್ ತೆರವುಗೊಳ್ಳಲಿದೆ. ಅಲ್ಲಿ ಸ್ವಲ್ಪ ಎತ್ತರದ ಸಬ್‍ವೇ ಹಾಗೂ ಪುಷ್ಪಾಂಜಲಿ ಚಿತ್ರಮಂದಿರ ಎದುರು ಮತ್ತೊಂದು ಕೆಳ ಸೇತುವೆ ನಿರ್ಮಿಸಲು ರೈಲ್ವೆ ಇಲಾಖೆ ಅವಕಾಶ ಕಲ್ಪಿಸಿದೆ. ಕೆಳ ಸೇತುವೆ ನಿರ್ಮಾಣದ ನಂತರ ಸೇತುವೆಗೆ ಸಂಪರ್ಕ ಕಲ್ಪಿಸಲು ರೈಲ್ವೆ ಹಳಿಯ ಮತ್ತೊಂದು ಬದಿ ಸಮಾನಾಂತರ ರಸ್ತೆ ನಿರ್ಮಾಣಗೊಳ್ಳಲಿದೆ.
ಎತ್ತರದ ಸಬ್‍ವೇ ಸಣ್ಣ ವಾಹನಗಳಿಗಷ್ಟೇ ಅವಕಾಶವಿರಲಿದೆ.