ದಾವಣಗೆರೆ: ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದನ್ವಯ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯು ಕಾರ್ಯನಿರ್ವಹಿಸುತ್ತಿದ್ದು ರಸ್ತೆ ಅಪಘಾತಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ವೈಜ್ಞಾನಿಕವಾಗಿ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಿತಿಯು ರಸ್ತೆ ಅಪಘಾತಗಳನ್ನು ಕಡಿಮೆ ಮಾಡುವ ಹಾಗೂ ಸುಗಮ ಸಂಚಾರದ ನಿಟ್ಟಿನಲ್ಲಿ ಪ್ರತಿ ತಿಂಗಳು ಸಭೆ ನಡೆಸಿ ಅಗತ್ಯವಿರುವ ಕ್ರಮ ಕೈಗೊಳ್ಳಲಿದೆ. ಜಿಲ್ಲೆಯಲ್ಲಿ ನಡೆಯುವ ಅಪಘಾತಗಳನ್ನು ಪರಾಮರ್ಶಿಸಿ ಇದು ಯಾವ ಕಾರಣದಿಂದ ಅಪಘಾತವಾಗಿದೆ ಎಂಬ ಬಗ್ಗೆ ಎಲ್ಲಾ ಹಂತದಲ್ಲಿ ಅಧ್ಯಯನ ನಡೆಸಿ ಇದಕ್ಕೆ ಕಾರಣವಾದ ಅಂಶಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಸಲಹೆಗಳನ್ನು ನೀಡಲಿದೆ.
ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿ, ಜಿಲ್ಲಾ ಹೆದ್ದಾರಿ ಸೇರಿದಂತೆ ಎಲ್ಲೆಲ್ಲಿ ಅಪಘಾತಗಳು ಸಂಭವಿಸುತ್ತಿವೆ ಎಂಬ ಅಂಕಿ ಅಂಶಗಳನ್ನು ಸಂಗ್ರಹಿಸಿ ಪದೇ ಪದೇ ಅಪಘಾತವಾಗಿದ್ದಲ್ಲಿ ಆ ಸ್ಥಳವನ್ನು ಜಂಟಿ ತನಿಖೆ ನಡೆಸಿ ಅಪಘಾತ ವಲಯದಿಂದ ಮುಕ್ತವಾಗುವಂತೆ ಕ್ರಮ ವಹಿಸಲಿದೆ ಎಂದರು.
ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಕೆಲವು ಕಡೆ ಮಳೆಗಾಲದಲ್ಲಿ ಮಳೆ ನೀರು ನಿಂತು ಚಲಿಸುವಾಗ ನಿಯಂತ್ರಣ ತಪ್ಪಿ ಅಪಘಾತಗಳು ಉಂಟಾಗುತ್ತಿರುವ ಬಗ್ಗೆ ಲಾರಿ ಮಾಲಿಕರ ಸಂಘದ ಅಧ್ಯಕ್ಷ ಸೈಯದ್ ಸೈಫುಲ್ಲಾ ಪ್ರಸ್ತಾಪಿಸಿದರು. ಈ ವೇಳೆ ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳು ಕ್ರಮ ವಹಿಸಬೇಕಾಗಿದ್ದು ಸಭೆಯಲ್ಲಿ ಹಾಜರಿರದ ಬಗ್ಗೆ ಮುಂದಿನ ಸಭೆಗೆ ಕಡ್ಡಾಯವಾಗಿ ಹಾಜರಾಗಲು ಸೂಚನೆ ನೀಡಿದರು. ಮತ್ತು ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಹಾಗೂ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗಕ್ಕೆ ಸಂಬಂಧಿಸಿದ ರಸ್ತೆಗಳಲ್ಲಿ ಈ ರೀತಿ ಒಂದು ಕಡೆ ನೀರು ನಿಲ್ಲುವಂತೆ ಇದ್ದಲ್ಲಿ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.
ರಿಪ್ಲೆಕ್ಟರ್ ಸ್ಟಿಕ್ಕರ್ ಅಳವಡಿಕೆಗೆ ಸೂಚನೆ; ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ಟ್ರ್ಯಾಕ್ಟರ್‍ಗಳಲ್ಲಿ ಡಬಲ್ ಟ್ರೇಲರ್‍ಗಳ ಮೂಲಕ ಕಬ್ಬು ಹಾಕಿಕೊಂಡು ರಸ್ತೆಯಲ್ಲಿ ಹೋಗಲಾಗುತ್ತಿರುತ್ತದೆ, ಆದರೆ ಹಿಂದಿನಿಂದ ಬರುವವರಿಗೆ ಇದು ಕಾಣುವುದಿಲ್ಲ, ಆದ್ದರಿಂದ ಕಡ್ಡಾಯವಾಗಿ ಎಲ್ಲಾ ಟ್ರ್ಯಾಕ್ಟರ್‍ಗಳಲ್ಲಿ ರಿಪ್ಲೆಕ್ಟರ್ ಸ್ಟಿಕ್ಕರ್ ಅಳವಡಿಸಬೇಕೆಂದು ಸಾರಿಗೆ ಅಧಿಕಾರಿಗಳಿಗೆ ಕ್ರಮಕ್ಕೆ ತಿಳಿಸಿದರು.
ಕಾಮಗಾರಿಗಳ ಸ್ಥಳಗಳಲ್ಲಿ ಸೈನ್ ಬೋರ್ಡ್ ಅಳವಡಿಕೆ ಸೂಚನೆ; ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಯು.ಜಿ.ಡಿ, ಜಲಸಿರಿ, ರಸ್ತೆ ಕಾಮಗಾರಿ ಸೇರಿದಂತೆ ಅನೇಕ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಲ್ಳುವಾಗ ಗುಂಡಿಗಳನ್ನು ತೆಗೆದಾಗ ಅಲ್ಲಿ ಕಡ್ಡಾಯವಾಗಿ ಸುತ್ತಲೂ ಸೂಚನಾ ಫಲಕಗಳನ್ನು ಅಳವಡಿಸಿ ಬ್ಯಾರಿಕೇಡ್ ಅಳವಡಿಸಬೇಕೆಂದು ತಿಳಿಸಿ ಜಲಸಿರಿ ಕಾಮಗಾರಿ ಕೈಗೊಳ್ಳುವಾಗ ಅಗೆದ ರಸ್ತೆಯನ್ನು ಪುನಃ ಮರುಸ್ಥಾಪನೆ ಮಾಡುವುದು ಸಂಬಂಧಿಸಿದ ಇಲಾಖೆಯ ಕೆಲಸವಾಗಿದೆ. ಸ್ಮಾರ್ಟ್‍ಸಿಟಿ ಲಿಮಿಟೆಡ್‍ನವರು ಕೈಗೊಳ್ಳುವ ಕಾಮಗಾರಿಗಳ ಬಗ್ಗೆ ಸಾಕಷ್ಟು ದೂರುಗಳ ಬಗ್ಗೆ ಸಭೆಯಲ್ಲಿ ಹಾಜರಿದ್ದ ವಿವಿಧ ಸಂಘ ಸಂಸ್ಥೆಯವರು ಜಿಲ್ಲಾಧಿಕಾರಿಯವರಿಗೆ ಈ ವೇಳೆ ತಿಳಿಸಿದರು.
ಮೀಟರ್ ಕಡ್ಡಾಯಗೊಳಿಸಿ; ಆಟೋಗಳಿಗೆ ಮೀಟರ್ ಅಳವಡಿಕೆ ಕಡ್ಡಾಯವಾಗಿದ್ದು ಕೋವಿಡ್ ಕಾರಣದಿಂದ ಇದನ್ನು ಮುಂದೂಡುತ್ತಾ ಬರಲಾಗಿದೆ. ಆದರೆ ಮುಂದಿನ ದಿನಗಳಲ್ಲಿ ಎಲ್ಲ ಆಟೋಗಳಲ್ಲಿ ಮೀಟರ್‍ನ್ನು ಕಡ್ಡಾಯವಾಗಿ ಅಳವಡಿಸಲೇಬೇಕಾಗಿದೆ. ರೈಲ್ವೆ ನಿಲ್ದಾಣದಲ್ಲಿ ಪ್ರೀ ಪೇಯ್ಡ್ ಕೌಂಟರ್‍ನ್ನು ಸ್ಥಾಪಿಸಲು ಸಲಹೆ ನೀಡಿದಾಗ ಅದನ್ನು ಕೈಗೊಳ್ಳಲು ತಿಳಿಸಿ ಈಗಾಗಲೇ ಪಾಲಿಕೆ ಮುಂದೆ ರೈಲ್ವೆ ನಿಲ್ದಾಣದಿಂದ ಬರುವವರಿಗೆ ರಸ್ತೆ ದಾಟಲು ಲಿಪ್ಟ್ ಸಮೇತ ಮೇಲುಸೇತುವೆ ನಿರ್ಮಾಣ ಮಾಡಲು ಯೋಜನೆ ರೂಪಿಸಲು ಪಾಲಿಕೆ ಆಯುಕ್ತರಿಗೆ ತಿಳಿಸಿದರು.
ಟ್ರಕ್ ಟರ್ಮಿನಲ್; ದಾವಣಗೆರೆಯಲ್ಲಿ ಸರಕು ಸಾಗಣೆ ಲಾರಿಗಳ ಸಂಖ್ಯೆ ಹೆಚ್ಚುತ್ತಿದ್ದು ಇದಕ್ಕೆ ಟ್ರಕ್ ಟರ್ಮಿಲ್ ನಿರ್ಮಾಣ ಮಾಡಬೇಕೆಂಬ ಸಲಹೆ ಮೇರೆಗೆ ಈಗಾಗಲೇ ಬಾತಿ ಹತ್ತಿರ 20 ಎಕರೆ ಜಮೀನು ಗುರುತಿಸಲಾಗಿದ್ದು ಹೆದ್ದಾರಿಯಿಂದ ರಸ್ತೆ ನಿರ್ಮಾಣ ಮಾಡಬೇಕಾಗಿದೆ. ಈ ಬಗ್ಗೆ ದೇವರಾಜ ಅರಸು ಟ್ರಕ್ ಟರ್ಮಿನಲ್ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ವ್ಯವಹರಿಸಲಾಗಿದ್ದು ಮತ್ತೊಮ್ಮೆ ಪತ್ರವನ್ನು ಬರೆಯಲು ಲೋಕೋಪಯೋಗಿ ಇಲಾಖೆ ಇಂಜಿನಿಯರ್‍ಗೆ ತಿಳಿಸಿದರು.
ಸಭೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್, ಸ್ಮಾರ್ಟ್‍ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ, ಪಾಲಿಕೆ ಆಯುಕ್ತ ವಿಶ್ವನಾಥ್ ಮುದ್ದಜ್ಜಿ, ಲೋಕೋಪಯೋಗಿ ಇಲಾಖೆಯ ಅಧಿಕಾರಿ ವಿಜಯ್ ಕುಮಾರ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ್.ಕೆ, ಡಿವೈಎಸ್‍ಪಿ ನರಸಿಂಹ ತಾಮ್ರಧ್ವಜ, ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸೈಯ್ಯದ್ ಸೈಫುಲ್ಲಾ, ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿ ಹಾಜರಿದ್ದರು.



