ಜಾಣ ಕಿವುಡು ಜಾಣ ಕುರುಡರ ಜಗತ್ತು
ಎಂದಿಗೂ ಬದಲಾಗದ ಅಂಗುಲಿಮಾಲಗಳು
ಅಟ್ಟಹಾಸದ ದುರ್ಯೋಧನ ಸಂತಾನ ಅಧಿಕಗೊಂಡು
ನಾಕ ನರಕಗಳ ನಡುವೆ ಅಂತರವಿಲ್ಲದೆ
ಸಂವೇದನೆಗಳು ಸಾಯುತ್ತಿವೆ ಗೆಳತಿ
ಕಣ್ಣ ಮುಂದೆ ನಡೆಯುವ ಶೋಷಣೆಗೆ ಮೂಕ ಸಾಕ್ಷಿಯಾದ ಮನ
ಕಟಕಟೆಗಳು ಬಿರುಕು ಬಿಟ್ಟು, ಕಟ್ಟೆಯೊಡೆಯುತಿವೆ
ನ್ಯಾಯ ದುಬಾರಿಯಾಗಿ,ದೂರವಾಗುತಿದೆ
ಅತ್ಯಾಚಾರ ಹತ್ಯೆಗಳಿಗೆ ಸಾಕ್ಷಿ ಸಿಗದೆ
ಬದುಕಲು ಹಕ್ಕು ಕೊಟ್ಟ ಸಂವಿಧಾನವಿದ್ದರೂ
ಸಂವೇದನೆಗಳು ಸಾಯುತ್ತಿವೆ ಗೆಳತಿ
ನನ್ನನ್ನು ಬದುಕಿಸು ,ನಾನು ಸಾಯಲಾರೆ ಎಂದು ಅಂಗಲಾಚಿದರೂ
ಬೀಭತ್ಸ ಮನಸ್ಥಿತಿಗಳು ಕ್ರೌರ್ಯ ಮೆರೆಯುತ್ತಿವೆ
ಶೋಷಣೆಯ ಗುತ್ತಿಗೆದಾರರ ರೌದ್ರತೆಯ ನರ್ತನ
ಸಂವೇದನೆಗಳು ಸಾಯುತ್ತಿವೆ ಗೆಳತಿ
ಸ್ಪಂದನೆ ಸಂದೇಶಗಳಿಲ್ಲದ ಜೀವನ ಗಾಥೆ
ಸುಖಾಸುಮ್ಮನೆ ಮುಖಾಮುಖಿ,ನಕಲಿ ಕಿರುನಗೆ
ನಿತ್ಯ ನಿರ್ಲಿಪ್ತ ಭಾವದಿಂದ ಬೆರೆಯುವ ಕ್ಷಣಗಳು
ಗೆಳತಿ ಇಲ್ಲಿ ನಿಸ್ಸಂಶಯವಾಗಿ ಸಂವೇದನೆಗಳು ಸಾಯುತ್ತಿವೆ
ಮತ, ಜಾತಿ – ಉಪಜಾತಿಗಳ ಭ್ರಾಂತಿಯಲಿ
ಸ್ವಯಂ ಕೇಂದ್ರಿತ ಹುಸಿ ಬೌದ್ಧಿಕತೆ
ಹುಸಿ ಪ್ರತಿಷ್ಟೆಗಳ ಸ್ವಯಂ ವೈಭವೀಕರಣ
ಅಸಹಿಷ್ಣುತೆಗಳ ಪರಾಕಾಷ್ಠೆಗಳಿಂದ
ಸಂವೇದನೆಗಳು ಸಾಯುತ್ತಿವೆ ಗೆಳತಿ
-ಅಶೋಕ್ ಕುಮಾರ್
ಸಹ ಪ್ರಾಧ್ಯಾಪಕ
ರಾಜ್ಯ ಶಾಸ್ತ್ರವಿಭಾಗ
ಸರ್ಕಾರಿ ಕಲಾಕಾಲೇಜು ಬೆಂಗಳೂರು



