ದಾವಣಗೆರೆ: ಜಿಲ್ಲೆಯಲ್ಲಿ ಪರಿಸರ ಪ್ರಯೋಗಾಲಯದ ಸುಸಜ್ಜಿತವಾದ ಕಟ್ಟಡ ನಿರ್ಮಾಣ ವಾಗಿದ್ದು, ಇದರಿಂದ ಪರಿಸರ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ ಎಂದು ಚಿತ್ರದುರ್ಗದ ಕ.ರಾ.ಮಾ.ನಿ.ಮಂ ವಲಯ ಕಚೇರಿಯ ಹಿರಿಯ ಪರಿಸರ ಅಧಿಕಾರಿ ಬಿ.ಎಸ್ ಮುರಳೀಧರ ಹೇಳಿದರು.
ಭಾನುವಾರ ನಗರದ ದೇವರಾಜ್ ಅರಸ್ ಬಡಾವಣೆಯ ಸಿ ಬ್ಲಾಕ್‍ನ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿಯ ಆವರಣದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆ-2022 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನೀರು ನಮ್ಮ ಜೈವಿಕ ಅಂಶವಾಗಿದ್ದು ಶುದ್ಧವಾದ ನೀರನ್ನು ಕುಡಿಯುವುದರಿಂದ ಆರೋಗ್ಯವಾಗಿರುತ್ತೇವೆ. ಅಂತೆಯೇ ಗಾಳಿ ಶುದ್ಧವಾದರೆ ನಮ್ಮ ಆರೋಗ್ಯ ಶುದ್ಧವಾಗಿರುತ್ತದೆ. ಗಿಡಮರಗಳು ಪ್ರಾಣವಾಯು ವನ್ನು ಕೊಡುವುದದ ಅವುಗಳನ್ನು ಉಳಿಸಿ ಬೆಳೆಸುವ ಪ್ರಯತ್ನವನ್ನು ಯುವಪೀಳಿಗೆ ಮಾಡಬೇಕು ಎಂದರು.
ಮಧ್ಯಕರ್ನಾಟಕದ ಕೇಂದ್ರ ಪರಿಸರ ಪ್ರಯೋಗಾಲಯ-2 ಇಂದು ದಾವಣಗೆರೆಯಲ್ಲಿ ಸುಸಜ್ಜಿತವಾಗಿ ನಿರ್ಮಾಣವಾಗಿದೆ. ಇದು ಮಾಲಿನ್ಯ ನಿಯಂತ್ರಣದ ಹೃದಯಭಾಗ ಇದ್ದಂತೆ, ಪರಿಸರ ಕಾರ್ಯಕ್ರಮ ನಿರಂತರವಾಗಿ ನಡೆದು ಪರಿಸರ ಸಂರಕ್ಷಣೆಯಲ್ಲಿ ಮಕ್ಕಳು ಜೊತೆಗೆ ನಾಗರಿಕರೆಲ್ಲರೂ ಕೈ ಜೋಡಿಸಿ ಪರಿಸರ ಸಂರಕ್ಷಣೆ ಮಡುವ ಕೆಲಸ ಮಾಡಬೇಕು ಎಂದರು.
ನಿವೃತ್ತ ಪ್ರಾಂಶುಪಾಲ ಮಂಜಪ್ಪ ಮಾತನಾಡಿ, ಜೂನ್ 5 ವಿಶ್ವ ಪರಿಸರ ದಿನಾಚರಣೆಯನ್ನು ನಾವೆಲ್ಲರೂ ಆಚರಿಸುತ್ತೇವೆ. ಅದರೊಟ್ಟಿಗೆ ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು. ಪರಿಸರ ಉಳಿಸುವ ಕೆಲಸ ಬರಿ ಮಾತಾಗದೆ ಕಾರ್ಯರೂಪದಲ್ಲಿ ಬರಬೇಕು, ಪ್ರತಿಯೊಬ್ಬರೂ ಒಂದೊಂದು ಗಿಡ ನೆಡಬೇಕು ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಜಿಲ್ಲೆಯಲ್ಲಿ ನಾಲ್ಕೈದು ವರ್ಷಗಳಿಂದ ಹಲವು ಕಾರ್ಖಾನೆಗಳಿಂದ ಕಲುಷಿತಗೊಂಡು ಬರುವ ನೀರನ್ನು ಶುದ್ಧೀಕರಿಸಿ ಕೃಷಿ ಹಾಗೂ ಇನ್ನಿತರೆ ಚಟುವಟಿಕೆಗಳಿಗೆ ಉಪಯೋಗಿಸಲು ಕ್ರಮ ಕೈ ಗೊಂಡಿದೆ ಎಂದರು.
ಜಿಲ್ಲಾ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಈ. ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಪರಿಸರ ಮಾಲಿನ್ಯದ ಮೂಲ ಮಾನವರೇ ಆಗಿದ್ದು ಅದನ್ನು ಸರಿಪಡಿಸುವುದು ಎಲ್ಲರ ಕರ್ತವ್ಯವಾಗಿದೆ. ನಾವುಗಳು ಪರಿಸರಸ್ನೇಹಿ ಜೀವನವನ್ನು ನಡೆಸಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪರಿಸರವಾದಿ ಡಾ||.ಎಚ್.ಕೆ. ಎಸ್ ಸ್ವಾಮಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ನಾವು ಪ್ರತಿನಿತ್ಯ ಬಳಸಿ ಬಿಸಾಡಿರುವ ಕಚ್ಚಾವಸ್ತುಗಳು ಪರಿಸರಕ್ಕೆ ಮಾರಕ, ನಾವು ಬಿಸಾಡಿರುವ ವಸ್ತುಗಳನ್ನೂ ಸಂಗ್ರಹಿಸಿ ಅವುಗಳಿಂದ ತಯಾರಿಸಿದ ಅನೇಕ ಪರಿಸರ ಸ್ನೇಹಿ ವಸ್ತುಗಳನ್ನು ಮಕ್ಕಳಿಗೆ ತೊರಿಸಿ ಜಾಗೃತಿ ಮೂಡಿಸಿದರು.
ಇದೇ ಕಾರ್ಯಕ್ರಮದಲ್ಲಿ ಮಂಡಳಿಯ ನಿವೃತ್ತ ಅಧಿಕಾರಿ ಗೊಣ್ಣೇ, ಹಾಗೂ ಇಲಾಖೆಯ ವಿವಿಧ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಜರಿದ್ದರು.
ಕಾರ್ಯಕ್ರಮಕ್ಕು ಮುನ್ನ ಕೇಂದ್ರ ಕಚೇರಿ ಬೆಂಗಳೂರಿನಲ್ಲಿ ಏರ್ಪಡಿಸಲಾಗಿದ್ದ ಸಚಿವರ ಕಾರ್ಯಕ್ರಮದ ನೇರ ವೀಕ್ಷಣೆಗೆ ಎಲ್ಲಾ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲಾಗಿತ್ತು.



