ಡಿವಿಜಿ ಸುದ್ದಿ, ಬಾಗಲಕೋಟೆ: ಉಪ ಚುನಾವಣೆ ಫಲಿತಾಂಶ ಬರುವುದಕ್ಕಿಂತ ಮುನ್ನ ರಾಜ್ಯ ರಾಜಕಾರಣದಲ್ಲಿ ಮತ್ತೆ ಕಾಂಗ್ರೆಸ್-ಜೆಡಿಎಸ್ ಮರು ಮೈತ್ರಿಯ ಮಾತು ಚರ್ಚೆಗೆ ಬಂದಿದೆ. ಈ ಬಾರಿ ಕಾಂಗ್ರೆಸ್ ನಲ್ಲಿ ದಲಿತ ಸಿಎಂ ಕೂಗು ಜೋರಾಗಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ದಲಿತ ಸಿಎಂ ಕೂಗನ್ನು ಚಣಾಕ್ಷತನದಿಂದ ನಿರ್ವಹಿಸಿದ್ದರು. ಇದೀಗ ಮತ್ತೊಮ್ಮೆ ದಲಿತ ಸಿಎಂ ಕೂಗು ಕೇಳಿ ಬರುತ್ತಿದೆ. ಇದಕ್ಕೆ ಸಿದ್ದರಾಮಯ್ಯ ಏನು ಅಂದ್ರು ಅನ್ನೋದೆ ಭಾರೀ ಕುತೂಹಲ ಕೆರಳಿಸಿದೆ.
ಈ ಬಗ್ಗೆ ಬಾಗಲಕೋಟೆಯಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಏನೇ ತೀರ್ಮಾನ ಆಗಬೇಕಾದರೂ ಫಲಿತಾಂಶ ಬರಬೇಕು. ಆಮೇಲೆ ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೆ ನೋಡೋಣ. ಈಗಲೇ ಚರ್ಚೆ ಮಾಡಿದರೆ ಹೇಗೆ? ನಮಗೊಂದು ಹೈಕಮಾಂಡ್ ಇದೆ.
ನಾವು ಉಪಚುನಾವಣೆಯಲ್ಲಿ 10 ಸೀಟು ಗೆಲ್ಲಬೇಕು. ನಾವು 5 ಸೀಟು ಗೆದ್ದರೆ, ಬಿಜೆಪಿಗೆ 112 ಸ್ಥಾನ ಆಗುತ್ತದೆ. ಕಾಂಗ್ರೆಸ್ ಕನಿಷ್ಟ 10, ಜೆಡಿಎಸ್ ಒಂದೆರಡು ಗೆಲ್ಲಬೇಕು. ಆಗ ಮರು ಮೈತ್ರಿ ವಿಚಾರ ಚರ್ಚೆಗೆ ಬರುತ್ತದೆ. ಇನ್ನು ಫಲಿತಾಂಶವೇ ಬಂದಿಲ್ಲ ಈಗಲೇ ಚರ್ಚೆ ಮಾಡಿದರೆ ಹೇಗೆ? ಈಗಲೇ ಚರ್ಚೆ ಮಾಡುವ ಅಗತ್ಯ ಇಲ್ಲ ಎಂದು ತಿಳಿಸಿದರು.



