ದಾವಣಗೆರೆ: ಲೋಕಸಭಾ ಚುನಾವಣೆಯಲ್ಲಿ ಸೋತ ನಂತರ ನಾನು, ನಮ್ಮ ಪತ್ನಿ, ಮಗ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿ ಮಾಡಿದ್ದೆವು. ಇದಾದ ಬಳಿಕ ಅವರು, ದಾವಣಗೆರೆಗೆ ನಾಲ್ಕು ಬಾರಿ ಬಂದಿದ್ದಾರೆ. ಒಮ್ಮೆಯೂ ಫೋನ್ ಮಾಡಿಲ್ಲ. ಭೇಟಿ ಮಾಡಿಲ್ಲ. ಜಿಲ್ಲೆಯ ಬಣ ಬಡಿದಾಟ ಯಾವಾಗ ಬಗೆಹರಿಯುತ್ತದೆ ಎಂಬುದನ್ನು ಅವರನ್ನೇ ಕೇಳಿ ಎಂದು ಕೇಂದ್ರ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ದಾವಣಗೆರೆ ಜನಾಕ್ರೋಶ ಯಾತ್ರೆಯಲ್ಲಿ ಭಾಗವಹಿಸಲು ತೀರ್ಮಾನಿಸಿದ್ದೆ. ಅವತ್ತು ಒಂದು ಮದುವೆ ಇತ್ತು. ಆದರೂ ಭಾಗವಹಿಸಲು ತೀರ್ಮಾನಿಸಿದ್ದೆ. ಯಾರೋ ಪುಣ್ಯಾತ್ಮರು ನನ್ನನ್ನು ಮರೆತಿದ್ದಾರೆ ಎಂದ್ರು, ಮತ್ಯಾಕೆ ಹೋಗಬೇಕೆಂದು ಸುಮ್ಮನಾದೆ. ವಿಜಯೇಂದ್ರ ಬಂದು ಒಂದು ದಿನ ಎಲ್ಲವನ್ನೂ ಬಗೆಹರಿಸುತ್ತಾರೆ. ಅವರು, ಬಂದು ಮಾತನಾಡಿದಾಗ ತಾನೇ ಒಂದಾಗುವುದು, ಬಿಡುವುದು, ಗುದ್ದಾಡುವುದು, ಕೈಕೈ ಮಿಲಾಯಿಸುವುದು ಎಂದರು.
ರಾಜ್ಯ ಸರ್ಕಾರ ಜಾತಿಗಣತಿಯಲ್ಲಿ ವೀರಶೈವ ಸಮಾಜವನ್ನು ಒಡೆದಿರುವುದು ಮಹಾ ಅಪರಾಧ ಮಾಡಿದೆ. 2011 ರಲ್ಲಿ ಜಾತಿಗಣತಿ ನಡೆಸಲಾಗಿತ್ತು. 14 ವರ್ಷಗಳ ನಂತರ ಜಾರಿಗೆ ತರಲು ತೀರ್ಮಾನ ತೆಗೆದುಕೊಳ್ಳಲು ಹೊರಟಿರುವುದು ಒಳ್ಳೆಯದಲ್ಲ. ಮರು ಜಾತಿಗಣತಿ ನಡೆಸಬೇಕು ಎಂದು ಒತ್ತಾಯಿಸಿದರು.
ಹಿಂದೂಗಳಲ್ಲಿ ಕೆಲ ಜಾತಿ ಸಂಖ್ಯೆ ಕಡಿಮೆ ತೋರಿಸಿ, ಅಲ್ಪಸಂಖ್ಯಾತರನ್ನು ಹತ್ತು ಜಾತಿ ಇದ್ದರೂ ಒಂದೇ ಎಂದು ತೋರಿಸಿದ್ದಾರೆ. ವೀರಶೈವ ಸಮಾಜವನ್ನು ಒಡೆದಿರುವುದು ಮಹಾ ಅಪರಾಧ. ಆ ರೀತಿ ಮಾಡಬಾರದು. ಮತ್ತೊಂದು ಸಾರಿ ಜಾತಿಗಣತಿ ನಡೆಸಬೇಕು ಎಂದು ಒತ್ತಾಯಿಸಿದರು.
ಹರಿಹರ ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಜನಾಕ್ರೋಶ ಯಾತ್ರೆಗೆ ಆಹ್ವಾನಿಸಲಾಗಿತ್ತು. ಅಂದು, ಅಮಾನತುಗೊಂಡಿರುವ ಬಿಜೆಪಿಯ ಎಲ್ಲ 18 ಶಾಸಕರು ಸ್ಪೀಕರ್ ಅವರನ್ನು ಭೇಟಿ ಮಾಡಬೇಕು ಎಂದು ಪಕ್ಷ ಸೂಚಿಸಿದ್ದರಿಂದ ಸ್ಪೀಕರ್ ಅವರ ಭೇಟಿಗೆ ಹೋಗಿದ್ದೇವು. ಹೀಗಾಗಿ ಜನಾಕ್ರೋಶ ಯಾತ್ರೆಯಲ್ಲಿ ಭಾಗವಹಿಸಲಿಲ್ಲ ಎಂದು ತಿಳಿಸಿದರು.



