ದಾವಣಗೆರೆ: ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಕೇಂದ್ರ ಸಂಘದ ವತಿಯಿಂದ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಗ್ರಾಮ ಲೆಕ್ಕಾಧಿಕಾರಿಗಳ ರಾಜ್ಯಮಟ್ಟದ ಸಮಾವೇಶ ಮೇ 14ರಂದು ಬೆಳಿಗ್ಗೆ 11 ಗಂಟೆಗೆ ವಿದ್ಯಾನಗರ ನೂತನ್ ಕಾಲೇಜು ಬಳಿಯ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಘದ ರಾಜ್ಯಾಧ್ಯಕ್ಷ ದೊಡ್ಡ ಬಸಪ್ಪ ರೆಡ್ಡಿ, ಕಂದಾಯ ಇಲಾಖೆ ಅತೀ ಪುರಾತನ ಇಲಾಖೆಯಾಗಿದ್ದು, ಪ್ರತಿಯೊಂದು ಕೆಲಸಗಳಿಗೂ ತಾಲ್ಲೂಕು ಕಚೇರಿಗೆ ಎಡತಾಕುವ ವ್ಯವಸ್ಥೆ ಇದ್ದು, ಗ್ರಾಮ ಮಟ್ಟದಲ್ಲಿಯೇ ಎಲ್ಲಾ ಸೇವೆಗಳು ದೊರಕಬೇಕಿದೆ. ಈ ನಿಟ್ಟಿನಲ್ಲಿ ಗ್ರಾಮ ಆಡಳಿತ ಅಧಿಕಾರಿ ಎಂದು ನಾಮಕರಣ ಮಾಡಬೇಕು, ಹುದ್ದೆಯನ್ನು ಮೇಲ್ದರ್ಜೆಗೆ ಏರಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸುಂತೆ ಸಮಾವೇಶದಲ್ಲಿ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಕಂದಾಯ ಇಲಾಖೆಗೆ ಪ್ರತ್ಯೇಕ ಕಾರ್ಯಾಲಯ, ದಾವಣಗೆರೆ ಕೇಂದ್ರ ಸಂಘದ ಕಟ್ಟಡಕ್ಕೆ ಸ್ಥಳ ಮಂಜೂರು ಹಾಗೂ ಕಟ್ಟಡಕ್ಕೆ 5 ಕೋಟಿ ರೂ. ಅನುದಾನಕ್ಕೆ ಮನವಿ, ಸುಳ್ಳು ಜಾತಿ ಪ್ರಮಾಣ ಪತ್ರ ನೀಡುವ ವಿಚಾರದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ನೌಕರರು ವಿರುದ್ಧ ಪ್ರಕರಣ ದಾಖಲಿಸುತ್ತಿರುವುದನ್ನು ಕೈಬಿಡಬೇಕು, ಹಾವೇರಿ ಜಿಲ್ಲೆಯಲ್ಲಿ ಗ್ರಾಮ ಲೆಕ್ಕಾಧಿಕಾರಿಗಳ ಮೇಲೆ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆಯನ್ನು ಹಿಂಪಡೆಯಬೇಕು, ಗ್ರಾಮ ಸಹಾಯಕರಿಗೆ ಸೇವಾ ಭದ್ರತೆ ಕಲ್ಪಿಸುವುದು, ಕೋವಿಡ್ ನಿಂದು ಮರಣ ಹೊಂದಿದ ಗ್ರಾಮ ಸಹಾಯಕರಿಗೆ 30ಲಕ್ಷ ರೂ. ಪರಿಹಾರ ನೀಡುವುದು ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಆಗ್ರಹಿಸಲಾಗುವುದು ಎಂದರು.
ಮೇ. 14ರಂದು ಸಮಾವೇಶವನ್ನು ಮುಖ್ಯಮಂತ್ರಿ ಬಸವರಾಜ್ ಎಸ್. ಬೊಮ್ಮಾಯಿ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಕಂದಾಯ ಸಚಿವ ಆರ್. ಅಶೋಕ್ ಆಗಮಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, ಸಂಸದ ಬಾ. ಜಿ.ಎಂ. ಸಿದ್ದೇಶ್ವರ್ ಉಪಸ್ಥಿತರಿರುವರು. ಅತಿಥಿಗಳಾಗಿ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಸರ್ಕಾರದ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಉಪಸ್ಥಿತರಿದ್ದು, ಸಂಘದ ರಾಜ್ಯಾಧ್ಯಕ್ಷ ಬಿ. ದೊಡ್ಡಬಸಪ್ಪ ರೆಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ಎ.ಎಂ. ಲೋಹಿತ್, ಎನ್. ನಾಗೇಶ್, ಪರಸಪ್ಪ ತಳವಾರ್, ಗುರುಮೂರ್ತಯ್ಯ ಉಪಸ್ಥಿತರಿದ್ದರು.