ದಾವಣಗೆರೆ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ವಿಚಾರವಾಗಿ ಈಗಾಗಲೇ ಸಮೀಕ್ಷೆ ಆರಂಭವಾಗಿದೆ. ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಸರ್ಕಾರಕ್ಕೆ ವರದಿ ನೀಡಲಿದ್ದಾರೆ. ಈ ವರದಿ ನಂತರ ಸಿಎಂ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದರು.
ಹರಿಹರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಸಲಾತಿ ವಿಚಾರದಲ್ಲಿ ಒಬ್ಬೊಬ್ಬ ನಾಯಕರು ಒಂದೊಂದು ರೀತಿಯಲ್ಲಿ ಹೋರಾಟದಲ್ಲಿ ತೊಡಗಿದ್ದಾರೆ. ಕೆಲವರು ಕೋ-ಕೋ, ಕಬಡ್ಡಿ ಆಡುತ್ತಿದ್ದಾರೆ. ಇನ್ನು ಕೆಲವರು ಚೆಸ್ ಆಡುತ್ತಿದ್ದಾರೆ. ಮೀಸಲಾತಿಗಾಗಿ ನಾನು ಬೀದಿಗಿಳಿದು ಹೋರಾಟ ಮಾಡಲು ಸಾಧ್ಯವಿಲ್ಲ. ಸರ್ಕಾರದ ಒಂದು ಅಂಗವಾಗಿ ಹಾಗೂ ಸಚಿವನಾಗಿ ಕೆಲಸ ಮಾಡ್ತಿದ್ದೇನೆ ಎಂದರು.
ಪಿಎಸ್ಐ ನೇಮಕಾತಿ ವಿಚಾರದಲ್ಲಿ ಸರ್ಕಾರ ಸ್ಪಷ್ಟವಾಗಿದ್ದು, ಮುಕ್ತವಾಗಿ ತನಿಖೆ ನಡೆಯುತ್ತಿದೆ. ಇದರಲ್ಲಿ ಯಾವುದೇ ಪಕ್ಷ, ಯಾವುದೇ ಜಾತಿ ವ್ಯಕ್ತಿಗಳಿದ್ದರೂ ಅವರನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದರು.



