ದಾವಣಗೆರೆ: ನಗರಗಳ ಸ್ವಚ್ಚತೆಯ ರೂವಾರಿಗಳಾದ ಮ್ಯಾನುಯೆಲ್ ಸ್ಕ್ಯಾವೆಂಜರ್‍ಗಳಿಗೆ ನಗರ ಆಶ್ರಯ ಯೋಜನೆಗಳಲ್ಲಿ ಪ್ರಥಮಾದ್ಯತೆ ದೊರಕಬೇಕೆಂದು ಜಿಲ್ಲಾ ಮಟ್ಟದ ಸಭೆಯಲ್ಲಿ ತೀರ್ಮಾನಿಸಿರುವುದಾಗಿ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿ ನಡೆದ ಮ್ಯಾನುಯೆಲ್ ಸ್ಕ್ಯಾವೆಂಜರ್‍ಗಳ ಸಭೆಯಲ್ಲಿ ಮಾತನಾಡಿದ ಅವರು ಗ್ರಾಮೀಣ ಪ್ರದೇಶಗಳಲ್ಲಿ ಮ್ಯಾನುಯೆಲ್ ಸ್ಕ್ಯಾವೆಂಜರ್‍ಗಳಿಗೆ ಆಶ್ರಯ ಯೋಜನೆಯಡಿ ಮನೆ ನೀಡಲು ನಿವೇಶನ ಲಭ್ಯವಿಲ್ಲದಿದ್ದಲ್ಲಿ ಅಕ್ಕಪಕ್ಕದ ಪಂಚಾಯತಿಗಳ ವ್ಯಾಪ್ತಿಯಲ್ಲಿ ನಿವೇಶನಗಳು ಲಭ್ಯವಿದ್ದಲ್ಲಿ ಅಲ್ಲಿಯೇ ನೀಡಬೇಕು ಎಂದರು.
ಸಫಾಯಿ ಕರ್ಮಚಾರಿಗಳಿಗೂ ಬ್ಯಾಂಕುಗಳಲ್ಲಿ ಆದ್ಯತೆಯ ಮೇಲೆ ಸಾಲ ನೀಡಲು ಬಾಂಕುಗಳು ಸಹಕರಿಸಬೇಕು. ಈಗಾಗಲೇ ನಗರದ ಹೊರವಲಯದಲ್ಲಿ ಗೃಹಭಾಗ್ಯ ಯೋಜನೆಯಡಿ ನಿರ್ಮಿಸಲಾಗಿರುವ ಮನೆಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಿ, ಪೌರಕಾರ್ಮಿಕರಿಗೆ ವಿತರಿಸಲು ಪಾಲಿಕೆಯಿಂದ ಗುತ್ತಿಗೆದಾರರಿಗೆ ಸೂಚಿಸಲು ತಿಳಿಸಿದ ಅವರು, ಈ ಮೂರು ವರ್ಗಗಳ ಕಾರ್ಮಿಕರಿಗೆ ಆದ್ಯತೆಯ ಮೇಲೆ ಸೌಲಭ್ಯಗಳನ್ನು ನೀಡಲು ಸಂಭಂಧಿಸಿದ ಇಲಾಖೆಗಳು ಕ್ರಮವಹಿಸಬೇಕೆಂದರು.
ಪಾಲಿಕೆ ಅಧಿಕಾರಿ ಮಾಹಿತಿ ನೀಡಿ ಗುತ್ತಿಗೆದಾರರುರ 3 ತಿಂಗಳ ಕಾಲಾವಕಾಶ ಕೇಳಿದ್ದು, ಮೇ ಅಂತ್ಯದೊಳಗೆ ಮುಗಿಸುವುದಾಗಿ ಹೇಳಿದ್ದಾರೆಂದರು, ಜಿಲ್ಲಾಧಿಕಾರಿಗಳು ಸಪಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರು ಬಂದಾಗ ಡಿಸೆಂಬರ್ ಅಂತ್ಯದೊಳಗೆ ಮುಗಿಸುವುದಾಗಿ ಹೇಳಿದ್ದರು, ಬೇಗನೆ ಕೆಲಸ ಮುಗಿಸಲು ಅವರಿಗೆ ಸೂಚಿಸಿ ಎಂದರು.
ಸಫಾಯಿ ಕರ್ಮಚಾರಿ ನಿಗಮದ ಅಧಿಕಾರಿ ಮಾಹಿತಿ ನೀಡಿ, ಈಗಾಗಲೆ 3 ಜನ ಮ್ಯಾನುಯೆಲ್ ಸ್ಕ್ಯಾವೆಂಜರ್ ಗಳಿಗೆ ಮನೆ ನೀಡಲಾಗಿದೆ. 7 ಜನ ನಿವೇಶನಕ್ಕಾಗಿ ಅರ್ಜಿ ನೀಡಿದ್ದಾರೆ ಅವರುಗಳಿಗೆ ನಿವೇಶನ ನೀಡಲು ಸಂಭಂಧಿಸಿದ ಗ್ರಾ.ಪಂಗಳಿಗೆ ತಿಳಿಸಲಾಗಿದೆ, ನಿಗಮದಿಂದ 79 ಜನರಿಗೆ ತಲಾ 2 ಲಕ್ಷ ರೂ. ಸಾಲ ನೀಡಲಾಗಿದೆ. 5 ಜನರಿಗೆ ವಾಹನ ಖರೀದಿಗೆ 5 ಲಕ್ಷ ರೂ. ನೀಡಿದ್ದು ಅವರು ವಾಹನಗಳನ್ನು ಖರೀದಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ ನಿಗಮದಿಂದ ಸಾಲ ಪಡೆದ ಕೆಲವರು ಕುರಿ ಸಾಕಾಣಿಕೆ ಮಾಡುತ್ತಿದ್ದಾರೆಂದರು.
ಸಮಿತಿ ಸದಸ್ಯ ಹುಚ್ಚೆಂಗಪ್ಪ ಮಾತನಾಡಿ ನಮ್ಮ ತಂದೆಯವರ ಕಾಲದಲ್ಲಿ ನೀಡಲಾದ ನಿವೇಶನಗಳಲ್ಲಿ ನಾಲ್ಕೈದು ಅಣ್ಣತಮ್ಮಂದಿರು ವಾಸಿಸುತ್ತಿದ್ದು ನಮಗೆ ಮತ್ತೊಮ್ಮೆ ನಿವೇಶನಗಳನ್ನು ನೀಡಿ ಎಂದರು.
ಸಫಾಯಿ ಕರ್ಮಚಾರಿಗಳ ಸಂಘದ ಮುಖಂಡರು ಮಾತನಾಡಿ, ಸಪಾಯಿ ಕರ್ಮಚಾರಿಗಳಿಗೆ ಕೇಂದ್ರ ಸರ್ಕಾರದಿಂದ ಹಲವಾರು ಸೌಲಭ್ಯಗಳಿದ್ದು 5 ಲಕ್ಷದಿಂದ 50 ಲಕ್ಷ ರೂ.ಗಳವರಗೆ ಸಾಲ ಸೌಲಭ್ಯಗಳಿದ್ದು ಕೇಂದ್ರದ ಯೋಜನೆಗಳು ರಾಜ್ಯದಲ್ಲಿ ಸಿಗುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕೆಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ,್ಲ ಹೊನ್ನಾಳಿ ಉಪವಿಭಾಧಿಕಾರಿ ಹುಲ್ಲುಮನಿ ತಿಮ್ಮಣ್ಣ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ರೇಷ್ಮಾ ಕೌಸರ್, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಲೀಡ್ ಬ್ಯಾಂಕ್ ಮ್ಯಾನೇಜರ್ ಸುಶೃತ್ ಶಾಸ್ತ್ರಿ, ಮುಖಂಡರಾದ ನೀಲಗಿರಿಯಪ್ಪ, ಶಂಕರ್, ರಂಗಮ್ಮ, ಶಾಂತಮ್ಮ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಇದ್ದರು.