ದಾವಣಗೆರೆ: ನಗರದಲ್ಲಿ ಇಂದು ಮತ್ತೆ ಹಿಜಾಬ್ ಗಲಾಟೆ ಭುಗಿಲೆದ್ದಿದೆ. ನಗರದ ಎ.ವಿ. ಕಮಲಮ್ಮ ಮಹಿಳಾ ಕಾಲೇಜಿಗೆ ಹಿಜಾಬ್ ಧರಿಸಿ ಬಂದಿದ್ದ ಕೆಲ ವಿದ್ಯಾರ್ಥಿನಿಯರಿಗೆ ತರಗತಿ ಪ್ರವೇಶಕ್ಕೆ ಅವಕಾಶ ನೀಡಲಿಲ್ಲ. ಇದನ್ನು ವಿರೋಧಿಸಿದ ವಿದ್ಯಾರ್ಥಿನಿಯರು ತಮಗೆ ಹಿಜಾಬ್ ನೊಂದಿಗೆ ತರಗತಿಗಳಿಗೆ ಹಾಜರಾಗಲು ಅನುಮತಿ ನೀಡಬೇಕು ಎಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು.
ಪ್ರಾಚಾರ್ಯರು, ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರೂ ವಿದ್ಯಾರ್ಥಿನಿಯರು ಮಾತು ಕೇಳಲಿಲ್ಲ. ಕೊನೆಗೆ ಕಾಲೇಜು ಮುಂದೆ ಪ್ರತಿಭಟನೆ ನಡೆಸಿದರು. ಪ್ರತಿಯೊಬ್ಬರೂ ನ್ಯಾಯಾಲಯದ ಆದೇಶ ಪಾಲನೆ ಮಾಡಬೇಕು. ನೀವು ಸಹ ನ್ಯಾಯಾಲಯದ ಆದೇಶದ ಅನ್ವಯ ಹಿಜಾಬ್ ತೆಗೆದಿರಿಸಿ ತರಗತಿಗಳಿಗೆ ಹಾಜರಾಗಬೇಕೆಂದರು. ಆದರೆ, ವಿದ್ಯಾರ್ಥಿನಿಯರು ಪಟ್ಟು ಬಿಡಲಿಲ್ಲ.
ತರಗತಿಗಳಿಗೆ ಹಾಜರಾಗಲು ಕಷ್ಟ ಆಗುವಂತಹ ವಿದ್ಯಾರ್ಥಿನಿಯರಿಗೆ ಆನ್ ಲೈನ್ ತರಗತಿಗಳಿಗೆ ಅವಕಾಶ ಮಾಡಿಕೊಡಲಾಗುವುದು. ಹಾಗಾಗಿ ಕಾಲೇಜು ಎದುರು ಕುಳಿತುಕೊಳ್ಳದೆ ಮನೆಗಳಿಗೆ ತೆರಳಿ ಎಂದು ಕೇಳಿದರೂ ವಿದ್ಯಾರ್ಥಿನಿಯರು ನಮಗೂ ಆಫ್ ಲೈನ್ ತರಗತಿಗಳಿಗೆ ಅನುಮತಿ ನೀಡಬೇಕು. ಇಲ್ಲವೇ ಎಲ್ಲರಿಗೂ ಆನ್ ಲೈನ್ ಕ್ಲಾಸ್ ನಡೆಸಿ ಎಂದು ಒತ್ತಾಯಿಸಿದರು.ನಮಗೂ ತರಗತಿಗಳಿಗೆ ಹಾಜರಾಗಲು ಅನುಮತಿ ನೀಡಬೇಕು. ನ್ಯಾಯಾಲಯದ ಆದೇಶವೇ ತಪ್ಪಾಗಿದೆ. ನಮಗೆ ನ್ಯಾಯ ಒದಗಿಸಬೇಕೆಂದರು.



