ದಾವಣಗೆರೆ: ದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣಕ್ಕೆ ಅವಕವಾಗುವ ಪ್ರಮುಖ ಅಧಿಸೂಚಿತ ಉತ್ಪನ್ನಗಳಿಗೆ ಪರಿಷ್ಕೃತ ಹಮಾಲಿ ದರಗಳನ್ನು ನಿಗದಿಪಡಿಸಲಾಗಿದೆ ಎಂದು ದಾವಣಗೆರೆ ಎಪಿಎಂಸಿ ಕಾರ್ಯದರ್ಶಿಗಳು ತಿಳಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ರೈತಬಾಂದವರು, ದಲ್ಲಾಲರು, ವರ್ತಕರು, ಮತ್ತು ಲೈಸನ್ಸ್ ಪಡೆದ ಹಮಾಲರಿಗೆ ದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣಕ್ಕೆ ಅವಕವಾಗುವ ಅಧಿಸೂಚಿತ ಕೃಷಿ ಹುಟ್ಟುವಳಿಯಾದ ಮೆಕ್ಕೆಜೋಳ ಉತ್ಪನ್ನವನ್ನು ಜ.17 ರಿಂದ ಪ್ರತಿದಿನ (ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ) ಬೆಳಿಗ್ಗೆ 09 ರಿಂದ ಮಧ್ಯಾಹ್ನ 12.50 ಗಂಟೆಯವರೆಗೆ ಇ-ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ಮಧ್ಯಾಹ್ನ 01 ಗಂಟೆಗೆ ಟೆಂಡರ್ ಘೋಷಣೆಯಾಗುತ್ತಿದೆ. ಇ-ಟೆಂಡರ್ ಪ್ರಕ್ರಿಯೆ ಆರಂಭದಿಂದ ಮೆಕ್ಕೆಜೋಳ ಉತ್ಪನ್ನಕ್ಕೆ ಸ್ಪರ್ಧಾತ್ಮಕ ದಾರಣೆಗಳು ಲಭ್ಯವಾಗುತ್ತಿದ್ದು, ಮೆಕ್ಕೆಜೋಳ ಉತ್ಪನ್ನದ ಇ-ಟೆಂಡರ್ಗೆ ಎಲ್ಲಾ ವರ್ಗದವರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ.
ದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣಕ್ಕೆ ಅವಕವಾಗುವ ಪ್ರಮುಖ ಅಧಿಸೂಚಿತ ಉತ್ಪನ್ನಗಳಿಗೆ ಪರಿಷ್ಕೃತ ಹಮಾಲಿ ದರಗಳನ್ನು ನಿಗದಿ ಪಡಿಸಲು ಜ.25 ರಂದು ಸಮಿತಿಯ ಅಧ್ಯಕ್ಷ ಎಸ್.ಕೆ ಚಂದ್ರಶೇಖರ್ ಇವರ ಅಧ್ಯಕ್ಷತೆಯಲ್ಲಿ ಸಭೆ ಏರ್ಪಡಿಸಲಾಯಿತು. ಸಭೆಯಲ್ಲಿ ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು, ದಲ್ಲಾಲರ ಸಂಘದ ಅಧ್ಯಕ್ಷರು ಪ್ರತಿನಿಧಿಗಳು, ವರ್ತಕರ ಸಂಘದ ಪ್ರತಿನಿಧಿಗಳು, ಹಮಾಲರ ಸಂಘದ ಅಧ್ಯಕ್ಷರು ಹಾಗೂ ಪ್ರತಿನಿಧಿಗಳು, ಮತ್ತು ಕಾರ್ಮಿಕ ಇಲಾಖೆ ಅಧಿಕಾರಿಗಳು ಹಾಜರಾಗಿ, ಸಮಿತಿಯ ಪ್ರಾಂಗಣಕ್ಕೆ ಆವಕವಾಗುವ ಪ್ರಮುಖ ಉತ್ಪನ್ನಗಳಾದ ಮೆಕ್ಕೆಜೋಳ, ಶೇಂಗಾ, ಭತ್ತ, ಸೂರ್ಯಕಾಂತಿ ಹಾಗೂ ಹತ್ತಿಗೆ ಪರಿಷ್ಕೃತ ಹಮಾಲಿ ದರಗಳನ್ನು ನಿಗದಿ ಪಡಿಸಲು ಅಕ್ಕ-ಪಕ್ಕದ ಇತರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ನಿಗದಿ ಪಡಿಸಿರುವ ದರಗಳನ್ನು ಹಾಗೂ ಕಾರ್ಮಿಕ ಇಲಾಖೆಯ ಕನಿಷ್ಠ ವೇತನಕ್ಕೆ ಅನುಗುಣವಾಗಿ ನಿಗದಿಪಡಿಸುವ ಕುರಿತು ಸಭೆಯಲ್ಲಿ ಕೂಲಂಕುಷವಾಗಿ ಚರ್ಚಿಸಿದ ಬಳಿಕ, ಪ್ರಮುಖ ಉತ್ಪನ್ನಗಳಾದ ಮೆಕ್ಕೆಜೋಳಕ್ಕೆ 10 ರೂ., ಶೇಂಗಾ, ಭತ್ತ ಮತ್ತು ಸೂರ್ಯಕಾಂತಿಗೆ 12 ರೂ. ನಂತೆ ಹೊಸದಾಗಿ ಹಮಾಲಿ ದರಗಳನ್ನು ನಿಗದಿಪಡಿಸಲಾಗಿದೆ.
ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಸಂದರ್ಭದಲ್ಲಿ, ಮಾರಾಟ ಪೂರ್ವದ ಹಮಾಲಿ ದರಗಳನ್ನು ನೀಡಬೇಕು. ನಂತರದ ಯಾವುದೇ ಅನಧಿಕೃತ ರಿವಾಜುಗಳನ್ನು ನೀಡಬಾರದೆಂದು ಹಾಗೂ ದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಇ-ಟೆಂಡರ್ ಮುಖಾಂತರ ಮಾರಾಟ ಮಾಡಿ ಸ್ಪರ್ಧಾತ್ಮಕ ಧಾರಣೆಗಳನ್ನು ಪಡೆಯಲು ತಿಳಿಸಲಾಗಿದೆ. ಸಭೆಯಲ್ಲಿ ಸಮಿತಿಯ ಅಧ್ಯಕ್ಷ ಎಸ್.ಕೆ ಚಂದ್ರಶೇಖರ್, ಉಪಾಧ್ಯಕ್ಷ ಬಿ.ಕೆ.ಈರಣ್ಣ, ಮಾಜಿ ಅಧ್ಯಕ್ಷ ಮುದೇಗೌಡ್ರು ಗಿರೀಶ್, ದಲ್ಲಾಲರ ಸಂಘದ ಅಧ್ಯಕ್ಷ ಕಂಸಾಗರದ ಪಂಚಾಕ್ಷರಪ್ಪ, ವರ್ತಕರ ಪ್ರತಿನಿಧಿ ಆರ್.ಜೆ ರುದ್ರೇಶ್ ಹಾಗೂ ಸಮಿತಿ ಕಾರ್ಯದರ್ಶಿ ಕೆ.ಸಿ ದೊರೆಸ್ವಾಮಿ, ಸಹಾಯಕ ನಿರ್ದೇಶಕ ಜೆ.ಪ್ರಭು ಹಾಜರಿದ್ದರು.



