ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆ ಯಲ್ಲಿ 206 ಸೀನ್ ಆಫ್ ಕ್ರೈಂ ಆಫೀಸರ್ (Scene of Crime Officer- SOCO) ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ನ್ಯಾಯ ವಿಜ್ಞಾನ ಪ್ರಯೋಗಾಲಯ (Forensic science laboratory) ಮತ್ತು ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ (Regional Forensic science laboratory) ಹಲವು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 206 ಸೀನ್ ಆಫ್ ಕ್ರೈಂ ಆಫೀಸರ್ ಹುದ್ದೆಗಳು ಖಾಲಿ ಇವೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಡಿಸೆಂಬರ್ 17ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಜನವರಿ 15, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅರ್ಜಿ ಶುಲ್ಕ ಪಾವತಿಸಲು ಜನವರಿ 18 ಕಡೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಪೊಲೀಸ್ ಇಲಾಖೆಯ ಅಧಿಕೃತ ವೆಬ್ಸೈಟ್ https://recruitment.ksp.gov.in ಗೆ ಭೇಟಿ ನೀಡಬಹುದು.
- ಹುದ್ದೆಯ ಹೆಸರು: ಸೀನ್ ಆಫ್ ಕ್ರೈಂ ಆಫೀಸರ್
- ಒಟ್ಟು ಹುದ್ದೆಗಳು: 206
- ವಿದ್ಯಾರ್ಹತೆ: ಪದವಿ
- ವೇತನ: ನಿಯಮಾನುಸಾರ
- ಉದ್ಯೋಗದ ಸ್ಥಳ: ಬೆಂಗಳೂರು
- ವಯೋಮಿತಿ: 21-35 ವರ್ಷ
- ಅರ್ಜಿ ಸಲ್ಲಿಕೆ ವಿಧಾನ: ಆನ್ಲೈನ್
- ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 17/12/2021
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15/01/2022
ಸ್ಥಳೀಯ ವೃಂದದ 28 ಹುದ್ದೆ ಹಾಗೂ ಉಳಿದ ವೃಂದದ 178 ಹುದ್ದೆ ಸೇರಿ ಒಟ್ಟು 206 SOCO ಹುದ್ದೆಗಳ ಭರ್ತಿಯಾಗಲಿದೆ. ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಮೀಸಲಾತಿ ಕಲ್ಪಿಸಿಲ್ಲ. ಸ್ಥಳೀಯ ಹಾಗೂ ಉಳಿದ ವೃಂದದ ವಿಭಾಗದಲ್ಲಿಯೇ ಅರ್ಜಿ ಸಲ್ಲಿಸಲು ಕಲ್ಯಾಣ ಕರ್ನಾಟಕ ವಿಭಾಗದ ಅಭ್ಯರ್ಥಿಗಳಿಗೆ ಸೂಚನೆ ನೀಡಲಾಗಿದೆ.
ವಿದ್ಯಾರ್ಹತೆ: ಅಪರಾಧ ಸ್ಥಳ ಪರಿಶೀಲನಾ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಶೇ.55 ರಷ್ಟು ಅಂಕಗಳೊಂದಿಗೆ ಕಡ್ಡಾಯವಾಗಿ ಪದವಿ ಪಡೆದಿರಬೇಕು. ಅಥವಾ ವಿಧಿ ವಿಜ್ಞಾನ ವಿಷಯದಲ್ಲಿ ಪದವಿಯಲ್ಲಿ ಶೇ. 55 ಅಂಕ ಗಳಿಸಿದ್ದು, ಒಂದು ವರ್ಷದ ಡಿಪ್ಲೋಮಾ ಪಡೆದವರು ಅರ್ಜಿ ಸಲ್ಲಿಸಬಹುದು. ಅಥವಾ ವಿಜ್ಞಾನ ವಿಷಯದಲ್ಲಿ ಪದವಿ ಪಡೆದ ಅಭ್ಯರ್ಥಿಗಳು ವಿಧಿ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಶೇ. 55 ಅಂಕಗಳೊಂದಿಗೆ ಉತ್ತೀರ್ಣರಾದವರು ಅರ್ಜಿ ಸಲ್ಲಿಸಲು ಅರ್ಹರು.
ವಯೋಮಿತಿ:ಅಪರಾಧ ಸ್ಥಳ ಪರಿಶೀಲನಾ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಸಾಮಾನ್ಯ ಅಭ್ಯರ್ಥಿಗಳ ವಯಸ್ಸು 21-35 ವರ್ಷದೊಳಗಿರಬೇಕು. ಒಬಿಸಿ ಅಭ್ಯರ್ಥಿಗಳಿಗೆ 38 ವರ್ಷ, SC/ST ಅಭ್ಯರ್ಥಿಗಳಿಗೆ 40 ವರ್ಷ ಗರಿಷ್ಠ ವಯೋಮಿತಿಯನ್ನು ನೀಡಲಾಗಿದೆ.
ಅಪರಾಧ ಸ್ಥಳ ಪರಿಶೀಲನಾ ಅಧಿಕಾರಿ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಉದ್ಯೋಗ ನೀಡಲಾಗುತ್ತದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವೇತನ ನೀಡಲಾಗುತ್ತದೆ. ಲಿಖಿತ ಪರೀಕ್ಷೆ, ವೈಯಕ್ತಿಕ ಸಂದರ್ಶನ ಮೂಲಕ ಆಯ್ಕೆ .



