ದಾವಣಗೆರೆ: ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಲು ಮುಂದೆ ಬರುವಂತೆ 150 ಖಾಸಗಿ ಕಂಪನಿಗೆ ಮನವಿ ಮಾಡಿದ್ದು,ಅದರಲ್ಲಿ 40 ಕಂಪನಿಗಳು ಮುಂದೆ ಬಂದಿವೆ. ಜಿಂದಾಲ್ ಕಂಪೆನಿಯವರು 50 ಮಕ್ಕಳನ್ನು ದತ್ತು ಪಡೆದಿದ್ದಾರೆ. ಅಮೃತ್ ಯೋಜನೆಯಡಿ ಮುಂದಿನ ಒಲಿಂಪಿಕ್ಗೆ 75 ಕ್ರೀಡಾಪಟುಗಳನ್ನು ಕಳುಹಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಕ್ರೀಡೆ, ಯುವಜನ ಮತ್ತು ರೇಷ್ಮೆ ಸಚಿವ ಕೆ.ಸಿ. ನಾರಾಯಣಗೌಡ ಹೇಳಿದರು.
ಜಿಲ್ಲಾ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಇಲಾಖೆಯಿಂದ ಆಯೋಜಿಸಿರುವ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಮಾತನಾಡಿ, 2022ರ ವೇಳೆಗೆ ನೂತನ ವೇತನ ಆಯೋಗ ರಚಿಸಬೇಕು.ಬೇರೆ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲಿ ವೇತನ ಕಡಿಮೆ ಇದ್ದು, ಸಾಕಷ್ಟು ವ್ಯತ್ಯಾಸದಿಂದ ಕೂಡಿದೆ. ಸರ್ಕಾರ ಕೂಡಲೇ ಈ ತಾರತಮ್ಯ ಸರಿಪಡಿಸಬೇಕು. ರಾಜ್ಯದಲ್ಲಿ 2.20 ಲಕ್ಷ ಹುದ್ದೆಗಳು ಖಾಲಿ ಇದ್ದು, ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಸರ್ಕಾರಿ ನೌಕರರಿಗೆ ಶೇ 3ರಷ್ಟು ತುಟ್ಟಿಭತ್ಯೆ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಿದ್ದೇವೆ.ವೇತನ ತಾರತಮ್ಯ ಸರಿಪಡಿಸುವಂತೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗುವುದು.ಈ ಹಿಂದೆ ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ 40 ಲಕ್ಷ ಅನುದಾನ ಸಿಗುತ್ತಿತ್ತು. ಈಗ ಕ್ರೀಡಾ ಸಚಿವರು 2 ಕೋಟಿ ನೀಡಿದ್ದಾರೆ ಎಂದು ತಿಳಿಸಿದರು.



