ನ್ಯಾಮತಿ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪಗೆ ಸೂಪರ್ ಕೊರೊನಾ ವಾರಿಯರ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ಸಂಸದ ಜಿ.ಎಂ. ಸಿದ್ದೇಶ್ವರ ಸೇರಿದಂತೆ ಪ್ರಮುಖರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಿದ್ದರು.
ನ್ಯಾಮತಿಯಲ್ಲಿ ಶಾಸಕ ರೇಣುಕಾಚಾರ್ಯ ಆಯೋಜಿಸಿದ್ದ ಕೊರೊನಾ ವಾರಿಯರ್ ಗಳಿಗೆ ಅಭಿನಂದನಾ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕೊರೋನಾ ಸಂದರ್ಭದಲ್ಲಿ ಸೇವೆ ಸಲ್ಲಿಸಿದ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳು, ಜಿಲ್ಲಾ ವೈದ್ಯಾಧಿಕಾರಿಗಳು ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ 5200 ಅಧಿಕಾರಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಯಡಿಯೂರಪ್ಪ, ಕೊರೊನಾ ಸಂಕಷ್ಟ ಇನ್ನೂ ಮುಗಿದಿಲ್ಲ. ಆದಷ್ಟು ಜಾಗೃತರಾಗಬೇಕಾಗಿದೆ. ಕೊರೊನಾ ವಾರಿಯರ್ ಸೇವೆ ಎಷ್ಟು ಶ್ರಮಿಸಿದರೂ ಕಡಿಮೆ. ಜನರ ಜೀವ ಉಳಿಸಿದ್ದು, ಕೊರೊನಾ ವಾರಿಯರ್ಗಳು. ಕೊರೊನಾ ಬಂದ ವೇಳೆ ಮನೆಯವರೇ ನೋಡಿಕೊಳ್ಳಲಾಗದ ಪರಿಸ್ಥಿತಿಯಲ್ಲಿ ವಾರಿಯರ್ಗಳು ಕೆಲಸ ಮಾಡಿದ್ದಾರೆ ಎಂದರು.
ಶಾಸಕ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಮಾಜಿ ಸಿಎಂ ಯಡಿಯೂರಪ್ಪ ಆಧುನಿಕ ಭಗೀರಥ. ಅವರು ಹೊನ್ನಾಳಿ ತಾಲೂಕಿನ ಕೆರೆಗಳನ್ನು ತುಂಬಿಸಲು 500 ಕೋಟಿ ರೂಪಾಯಿ ಅನುದಾನ ನೀಡಿದ್ದರು. ಹೊನ್ನಾಳಿ ಕ್ಷೇತ್ರಕ್ಕೆ ಸಾವಿರಾರು ಕೋಟಿ ಅನುದಾನ ನೀಡಿದ್ದಾರೆ. ಇಂದು ಬಿ.ಎಸ್. ಯಡಿಯೂರಪ್ಪ ಅವರಿಗೆ ಸೂಪರ್ ಕೊರೊನಾ ವಾರಿಯರ್ ಪ್ರಶಸ್ತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಸಚಿವ ಸುಧಾಕರ್ ಮಾತನಾಡಿ, 100 ಕೋಟಿ ಡೋಸ್ ಲಸಿಕೆ ನೀಡಲು ಕೇಂದ್ರ ನಿರ್ಧರಿಸಿದೆ. ಕೋವಿಡ್ ವೇಳೆ ಬಿ.ಎಸ್. ಯಡಿಯೂರಪ್ಪ ಎಲ್ಲರಿಗೆ ಮನೋಸ್ಥೈರ್ಯ ತುಂಬಿದ್ದಾರೆ. ನನಗೆ ಆರೋಗ್ಯ ಖಾತೆ ನೀಡಿ ಸೇವೆ ಮಾಡಲು ಅವಕಾಶ ನೀಡಿದ್ದರು ಎಂದರು.
ಸನ್ಮಾನ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಆಯನೂರ ಮಂಜುನಾಥ್ ಮಾತನಾಡಿ, ಕೊರೊನಾ ಸಂಕಷ್ಟದ ಕಾಲದಲ್ಲಿ ಆಸ್ಪತ್ರೆಯಿಂದ ಅಧಿಕಾರ ನಡೆಸಿದ ದೇಶದ ಏಕೈಕ ನಾಯಕ ಯಡಿಯೂರಪ್ಪ. ಕೊರೊನಾ ಬಂದಿದೆ ಅಂದ್ರೆ ಜನ ಆತನನ್ನು ಅಸ್ಪೃಶ್ಯ ಎಂಬಂತೆ ನೋಡುತ್ತಿದ್ದರು. ಇಂತಹ ಪರಿಸ್ಥಿತಿಯಲ್ಲಿ ಯಡಿಯೂರಪ್ಪ ದಿಟ್ಟತನದಿಂದ ಹೋರಾಟ ಮಾಡಿ ಬಡವರ ಜೀವನ ಉಳಿಸಿದ್ದಾರೆ ಎಂದರು.



