ಡಿವಿಜಿಸುದ್ದಿ.ಕಾಂ
ದಾವಣಗೆರೆ: ರೋಟಾ ವೈರಸ್ ಲಸಿಕೆಯನ್ನು ಎಲ್ಲಾ ಮಕ್ಕಳಿಗೆ ಹಾಕಿಸಲು ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ಶ್ರಮಿಸಬೇಕಿದೆ ಎಂದು ಶಾಸಕ ಎಸ್.ಎ. ರವೀಂದ್ರನಾಥ್ ಸೂಚಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಇಲಾಖೆ, ಜಿಲ್ಲಾ ಚೀಗಟೇರಿ ಆಸ್ಪತ್ರೆ ಸಹಯೋಗದೊಂದಿಗೆ ಆಯೋಜಿಸಿದ್ದ, ರೋಟಾ ವೈರಸ್ ಲಸಿಕೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಗುವಿಗೆ ಲಸಿಕೆ ಹಾಕಿ ಮಾತನಾಡಿದರು.ಕಡಿಮೆ ಅವಧಿಯಲ್ಲಿ ರೋಟಾ ವೈರಸ್ ಲಸಿಕೆಯನ್ನು ಎಲ್ಲಾ ಮಕ್ಕಳಿಗೂ ಹಾಕುವ ಮೂಲಕ ಮಕ್ಕಳ ಆರೋಗ್ಯ ಕಾಪಾಡಬೇಕು ಎಂದ್ರು.
ರೋಟ ವೈರಸ್ ಲಸಿಕೆ ಬಗ್ಗೆ ಜಾಗೃತಿ ಅಗತ್ಯ
ಲಸಿಕೆ ಬಗ್ಗೆ ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆ ಪಾತ್ರ ಮುಖ್ಯ
ಉಚಿತವಾಗಿ ಎಲ್ಲಾ ಸಾರ್ವಜನಿಕ ಆಸ್ಪತ್ರೆ ಲಸಿಕೆ ಲಭ್ಯ
ಪ್ರತಿ ಮಕ್ಕಳಿಗೂ ರೋಟ ವೈರಸ್ ಲಸಿಕೆ ಹಾಕಿಸಿ ವಾಂತಿ-ಭೇದಿ ನಿಯಂತ್ರಿಸಿ
ಮಕ್ಕಳ ತಜ್ಞ ಬಣಪೂರ್ ಮಠ್ ಮತಾನಾಡಿ, ಸರ್ಕಾರದ ವತಿಯಿಂದ ಉಚಿತವಾಗಿ ಪ್ರತಿ ಮಗುವಿಗೂ ರೋಟಾ ವೈರಸ್ ಲಸಿಕೆ ತಲುಪುವಂತಾಗಿರುವುದು ಮಕ್ಕಳ ತಜ್ಞರಿಗೂ ಸಂತಸದ ವಿಷಯ. ಆರು ತಿಂಗಳಿಂದ ಮೂರು ವರ್ಷದೊಳಗಿನ ಮಕ್ಕಳಲ್ಲಿ ಈ ರೋಟಾ ವೈರಸ್‍ನಿಂದಾಗಿ ವಾಂತಿ ಭೇಧಿಯಂತಹ ಕಾಯಿಲೆಗಳು ಹೆಚ್ಚಾಗಿ ಕಂಡುಬರುತ್ತವೆ. ಮಕ್ಕಳು ಕೈಗೆ ಸಿಕ್ಕಿದ್ದನ್ನೆಲ್ಲಾ ಬಾಯಿಗೆ ಹಾಕಿಕೊಳ್ಳುವುದರಿಂದ ರೋಟಾ ವೈರಸ್ ಮಕ್ಕಳ ದೇಹವನ್ನು ಪ್ರವೇಶಿಸುತ್ತದೆ. ಯಾವ ಮಗುವೂ ಈ ಕಾಯಿಲೆಯಿಂದ ಮುಕ್ತವಾಗಿರಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಂದು ಮಗುವಿಗೂ ರೋಟಾ ವೈರಸ್ ಲಸಿಕೆ ಹಾಕಿಸುವುದು ಅವಶ್ಯಕವಾಗಿರುತ್ತದೆ. ಎಲ್ಲಾ ತಾಯಂದಿರು ತಮ್ಮ ಮಗುವಿಗೆ ಎರಡು ವರ್ಷದ ವರೆಗೆ ಎದೆಹಾಲು ಉಣಿಸುವುದು ಹಾಗೂ ಚಿಕ್ಕ ಮಕ್ಕಳಲ್ಲಿ ಶುಚಿತ್ವ ಕಾಪಾಡುವುದು ಬಹಳ ಮುಖ್ಯ ಎಂದರು.
“ಆರು ತಿಂಗಳಿಂದ ಮೂರು ವರ್ಷದೊಳಗಿನ ಮಕ್ಕಳಲ್ಲಿ ಈ ರೋಟಾ ವೈರಸ್‍ನಿಂದಾಗಿ ವಾಂತಿ ಭೇಧಿಯಂತಹ ಕಾಯಿಲೆಗಳು ಹೆಚ್ಚಾಗಿ ಕಂಡುಬರುತ್ತವೆ. ಮಕ್ಕಳು ಕೈಗೆ ಸಿಕ್ಕಿದ್ದನ್ನೆಲ್ಲಾ ಬಾಯಿಗೆ ಹಾಕಿಕೊಳ್ಳುವುದರಿಂದ ರೋಟಾ ವೈರಸ್ ಮಕ್ಕಳ ದೇಹವನ್ನು ಪ್ರವೇಶಿಸುತ್ತದೆ”.
– ಮಕ್ಕಳ ತಜ್ಞ ಬಣಪೂರ್ ಮಠ್
ಡಿಎಚ್‍ಓ ಡಾ.ರಾಘವೇಂದ್ರಸ್ವಾಮಿ ಮಾತನಾಡಿ, ಈ ಹಿಂದೆ ರೋಟಾ ವೈರಸ್ ಲಸಿಕೆಯನ್ನು ಹಣ ಇದ್ದವರು ಮಾತ್ರ ಹಾಕಿಸುತ್ತಿದ್ದರು. ಸರ್ಕಾರ ಈಗ ಪ್ರತಿ ಬಡ ಮಗುವಿಗೂ ಈ ಲಸಿಕೆ ಉಚಿತವಾಗಿ ಸಿಗುವಂತೆ ಮಾಡಿದೆ. ಈ ಕುರಿತು ಹೆಚ್ಚಿನ ಪ್ರಚಾರಕ್ಕಾಗಿ ಆಶಾ ಕಾರ್ಯಕರ್ತೆಯರು ತಮ್ಮ ಕಾರ್ಯ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರತಿ ಮನೆಗಳಿಗೂ ತೆರಳಿ ರೋಟಾ ವೈರಸ್ ಲಸಿಕೆ ಕುರಿತು ಮಾಹಿತಿ ನೀಡಿ ಈ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಕಾರಾಧ್ಯ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಚ್. ಉಮಾಪತಿ, ಮಕ್ಕಳ ತಜ್ಞ ರೇವಣಪ್ಪ, ಜಿಲ್ಲಾ ಆರೋಗ್ಯ ಮೇಲ್ವಿಚಾರಕ ರಾಚಪ್ಪ ಕುಪಸ್ತ ಸೇರಿದಂತೆ ಮಕ್ಕಳ ತಜ್ಞರು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಸುದ್ದಿ, ಜಾಹೀರಾತಿಗಾಗಿ ವಾಟ್ಸ್ ಅಪ್ ನಂಬರ್ : 9844460336,7483892205