ದಾವಣಗೆರೆ: ಟೊಮ್ಯಾಟೋ ಬೆಳೆಯಲ್ಲಿ ಉತ್ತಮ ಇಳುವರಿ ಪಡೆಯಲು ಸಮಗ್ರ ಪೋಷಕಾಂಶಗಳ ನಿರ್ವಹಣೆ ಬಹಳ ಮುಖ್ಯ ಎಂದು ದಾವಣಗೆರೆಯ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ತಜ್ಞ ಬಸವನಗೌಡ ಎಂ. ಜಿ. ಅಭಿಪ್ರಾಯಪಟ್ಟರು.
ದಾವಣಗೆರೆ ತಾಲ್ಲೂಕು ಅಗಸನಕಟ್ಟೆ ಗ್ರಾಮದಲ್ಲಿ ವ್ಶೆಜ್ಞಾನಿಕ ಕ್ಷೇತ್ರ ಭೇಟಿಯ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಸ್ತುತ ವರ್ಷ ಈ ಗ್ರಾಮದಲ್ಲಿ ಕೇಂದ್ರದವತಿಯಿಂದ ಟೊಮ್ಯಟೋ ಬೆಳೆಯಲ್ಲಿ ಉತ್ತಮ ಇಳುವರಿಯ ಪೋಷಕಾಂಶಗಳ ತುಲನೆಯ ಬಗ್ಗೆ ಕ್ಷೇತ್ರ ಪ್ರಯೋಗವನ್ನು ಹಮ್ಮಿಕೊಂಡಿದ್ದು, ಪೋಷಕಾಂಶ ನಿರ್ವಹಣೆಗಾಗಿ ತರಕಾರಿ ಸ್ಪೆಷಲ್ 5 ಗ್ರಾಂ ಪ್ರತೀ ಲೀಟರ್ ನೀರಿಗೆ ಬೆರಸಿ ಸಿಂಪಡಿಸುವುದು ಹಾಗೂ ಸಮುದ್ರ ಕಳೆಯ ದ್ರಾವಣ ಸಾಗರೀಕಾವನ್ನು 2 ಮಿಲೀ ಪ್ರತೀ ಲೀಟರ್ ನೀರಿಗೆ ಬೆರಸಿ ಸಿಂಪಡಿಸುವ ತಂತ್ರಜ್ಞಾನವನ್ನು ಪರಿಚಯಿಸಿದ್ದೇವೆ. ಪ್ರಸ್ತುತ ಬೆಳೆ ಹಣ್ಣಿನ ಹಂತದಲ್ಲಿದ್ದು ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದೇನೆ ಎಂದು ತಿಳಿಸಿದರು.
ಪ್ರಸ್ತುತ ಕಳೆದ ವಾರದಿಂದ ಹಗಲು ಉಷ್ಣಾಂಶ ಹೆಚ್ಚಾಗುತ್ತಿದ್ದು ಸಂಜೆ ವೇಳೆ ಉತ್ತಮ ಮಳೆಯಾಗುತ್ತಿದೆ. ಈ ಸಂದರ್ಭದಲ್ಲಿ ಟೊಮ್ಯಾಟೋ ಬೆಳೆಗೆ ಕೊನೆ ಅಂಗಮಾರಿ ರೋಗ ಬರುವ ಸಂಭವವಿದ್ದು ರೈತರು ಮುನ್ನೆಚ್ಚರಿಕೆಯಾಗಿ ಅಜಾಕ್ಸಿಸ್ಟೋಬಿಲಿನ್ 0.75 ಮಿಲೀ ಅಥವಾ ಮ್ಯಾಂಕೋಜೆಬ್ 2 ಗ್ರಾಂ. ಪ್ರತೀ ಲೀಟರ್ ನೀರಿಗೆ ಬೆರಸಿ ಸಿಂಪರಿಸಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರದ ಸಸ್ಯ ಸಂರಕ್ಷಣಾ ತಜ್ಞ ಡಾ. ಅವಿನಾಶ್ ಟಿ.ಜಿ., ತೋಟಗಾರಿಕೆ ವಿದ್ಯಾರ್ಥಿಗಳಾದ ಪಲ್ಲವಿ, ಚಂದ್ರಾನಾಯಕ್, ರೈತರಾದ ವಾಮದೇವಪ್ಪ, ಬಸವರಾಜ ಹಾಜರಿದ್ದರು.



