ದಾವಣಗೆರೆ: ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಪಳಗಿದ ರಾಜಕಾರಣಿ. ಯಾವ ಎತ್ತಿಗೆ ಹೊಡೆದ್ರೆ, ಯಾವುದು ಸರಿ ಹೋಗುತ್ತೆ ಅನ್ನೋದನ್ನು ಕರಗತ ಮಾಡಿಕೊಂಡ ಸಿದ್ದರಾಮಯ್ಯ ಅವರು, ಮಧ್ಯ ಕರ್ನಾಕಟ ದಾವಣಗೆರೆಯಿಂದ ಮತ್ತೆ ಅಹಿಂದ ಸಂಘಟನೆಗೆ ಮುಂದಾಗಿದ್ದಾರೆ.
ಹೌದು, ನಾಳೆ ದಾವಣಗೆರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಹಿಂದುಳಿದ ವರ್ಗಗಳ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆಗೆ ಮುಂದಾಗಿದ್ಧಾರೆ. ಈ ಹಿನ್ನೆಲೆ ಜಿಲ್ಲೆಯ ಎಲ್ಲಾ ತಾಲ್ಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿಸುವ ಯೋಜನೆಯನ್ನು ಸ್ಥಳೀಯ ಹಿಂದುಳಿದ ವರ್ಗಗಳ ನಾಯಕರು ಮಾಡಿಕೊಂಡಿದ್ದಾರೆ. ಹೀಗಾಗಿ ಈ ಧರಣಿ ರಾಜಕೀಯವಾಗಿ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ.
ಈ ಹಿಂದೆ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎಚ್. ಕಾಂತರಾಜ್ ನೇತ್ರತ್ವದಲ್ಲಿ, ಜಾತಿವಾರು ಸಮೀಕ್ಷೆ ಸಿದ್ದಪಡಿಸಿದ ವರದಿ ಬಿಡುಗಡೆ ಮತ್ತು ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಬೃಹತ್ ಹೋರಾಟ ನಡೆಯಲಿದೆ. ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಆಶ್ರಯದಲ್ಲಿ ಈ ಹೋರಾಟ ನಡೆಯಲಿದೆ. ಈ ಮೂಲಕ ಮಧ್ಯ ಕರ್ನಾಟಕ ದಾವಣಗೆರೆಯಲ್ಲಿ ಬೃಹತ್ ಧರಣಿ ಮೂಲಕ ಸಿದ್ದರಾಮಯ್ಯ ತಮ್ಮ ಬಲವನ್ನು ಇನ್ನಷ್ಟು ಗಟ್ಟಿ ಮಾಡಿಕೊಳ್ಳಲು ಮುಂದಾಗಿದ್ದಾರೆ.
ನಾಳೆ ನಗರದ ಸಂಗೊಳ್ಳಿ ರಾಯಣ್ಣ ಹಾಗೂ ದೇವರಾಜ ಅರಸು ಅವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆಯುವ ಹೋರಾಟದಲ್ಲಿ ಸಿದ್ದರಾಮಯ್ಯ ಪಾಲ್ಗೊಳ್ಳಲಿದ್ದಾರೆ. ನಂತರ ಬೆಲೆ ಎರಿಕೆ ವಿರುದ್ಧ ಜಿಲ್ಲಾ ಕಾಂಗ್ರೆಸ್ ಪಕ್ಷ ಆಯೋಜಿಸಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಧರಣಿಯಲ್ಲಿ ಎಚ್.ಎಂ.ರೇವಣ್ಣ, ವಿ.ಆರ್.ಸುದರ್ಶನ್, ಕೆ.ರಮೇಶ್ ಕುಮಾರ್, ವಿ.ಎಸ್.ಉಗ್ರಪ್ಪ, ಲಕ್ಷ್ಮಿ ನಾರಾಯಣ್, ಸಿ.ಎಸ್.ದ್ವಾರಕನಾಥ್ ಭಾಗಿಯಾಗಲಿದ್ದಾರೆ.



