ಡಿವಿಜಿಸುದ್ದಿ.ಕಾಂ
ದಾವಣಗೆರೆ : ರಾಜ್ಯ ಬಿಜೆಪಿ ಸರ್ಕಾರದಲ್ಲಿ ದಲಿತ ಸಮುದಾಯದ ಸರಳ, ಸಜ್ಜನಿಕೆಯ ಗೋವಿಂದ ಕಾರಜೋಳ ಅವರನ್ನು ಡಿಸಿಎಂ ಸ್ಥಾನಕ್ಕೆ ಆಯ್ಕೆ ಮಾಡಿದಕ್ಕೆ ಬಿಜೆಪಿ ನಾಯಕರಿಗೆ ದಾವಣಗೆರೆಯ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಕೃತಜ್ಞತೆ ಸಲ್ಲಿಸಲಾಯಿತು.
ದಾವಣಗೆರೆಯಲ್ಲಿ ವಿವಿಧ ಸಂಘಟನೆ ಮುಖಂಡರು ಜಂಟಿಯಾಗಿ ಪತ್ರಿಕಾಗೋಷ್ಟಿ ನಡೆಸಿ ಬಿಜೆಪಿ ನಾಯಕರಿಗೆ ಅಭಿನಂದನೆ ಸಲ್ಲಿಸಿದರು. ಸಾವಿರಾರು ವರ್ಷಗಳಿಂದ ತುಳಿತಕ್ಕೆ ಒಳಗಾಗಿದ್ದ ದಲಿತ ಸಮುದಾಯಕ್ಕೆ ಸೇರಿದ ಗೋವಿಂದ ಕಾರಜೋಳ ಅವರಿಗೆ ಡಿಸಿಎಂ ಸ್ಥಾನ ನೀಡಿರುವುದಕ್ಕೆ ಬಿಜೆಪಿ ರಾಷ್ಟ್ರೀಯ ನಾಯಕರು ಮತ್ತು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ. ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ನಂತರ ದೇಶ ಮತ್ತು ರಾಜ್ಯದಲ್ಲಿ ದಲಿತ ಸಮುದಾಯದ ಅನೇಕ ನಾಯಕರು ಉತ್ತಮ ಸಂಸದೀಯ ಪಟುಗಳಾಗಿ ಹೊರಹೊಮ್ಮಿದ್ದಾರೆ. ಅವರಲ್ಲಿ ಎನ್. ರಾಚಯ್ಯ, ಎನ್. ಪ್ರಭಾಕರ್, ಬಿ. ಬಸವಲಿಂಗಪ್ಪ, ಜಿ. ದುಗ್ಗಪ್ಪ , ಎಚ್.ಕೆ. ರಂಗನಾಥ್ ಸೇರಿದಂತೆ ಅನೇಕರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅದೇ ರೀತಿ ಬಿಜೆಪಿಯಲ್ಲಿ ಸರಳ ಸಜ್ಜನಿಕೆ ರಾಜಕಾರಣಿಯಾಗಿರುವ ಗೋವಿಂದ ಕಾರಜೋಳ ಅವರು ಉತ್ತಮವಾಗಿ ಕೆಲಸ ಮಾಡಲಿ ಎಂದು ಹಾರೈಸುತ್ತೇವೆ.
ಕಳೆದ ೧೦ ವರ್ಷದಿಂದ ನೆನೆಗುದಿಗೆ ಬಿದ್ದಿರುವ ನ್ಯಾ. ಸದಾಶಿವ ಆಯೋಗದ ವರದಿಯನ್ನು ಜಾರಿಗೆ ಬರುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಆಗ್ರಹಿಸಲಾಯಿತು. ದಲಿತ ಮುಖಂಡರಾದ ಡಾ. ಎಚ್. ವಿಶ್ವನಾಥ್, ಹೆಗ್ಗೆರೆ ರಂಗಪ್ಪ, ಟಿ. ಬಸವರಾಜು, ಕುಕ್ಕುವಾಡ ಮಲ್ಲೇಶ್, ಬಿ. ದುಗ್ಗಪ್ಪ, ಕೆಟಿಜಿನಗರ, ಬೆಳ್ಳಿಗನೂರು ಮರ್ತಪ್ಪ, ಎಸ್.ಎಚ್. ಸಾಂತರಾಜು, ಸಿ. ಬಸವರಾಜು ಉಪಸ್ಥಿತರಿದ್ದರು.
ಸುದ್ದಿ, ಜಾಹೀರಾತಿಗಾಗಿ ವಾಟ್ಸ್ ಅಪ್ ನಂಬರ್ : 9844460336, 7483892205