ದಾವಣಗೆರೆ: ಬರೀ ಪೆಟ್ರೋಲ್, ಪೆಟ್ರೋಲ್ ಅಂತಾ ಪದೇ ಪದೇ ಅದನ್ನೇ ಕೇಳ್ತೀರಾ..! ಆ ಸುದ್ದಿ ಬಿಟ್ಟು ಬೇರೆ ಇಲ್ವಾ. ನಾನು ಏನಾದ್ರೂ ಹೇಳಿದ್ರೆ ಅದನ್ನೇ ವಾಟ್ಸಪ್ ನಲ್ಲಿ ಹಾಕಿ ಗಬ್ಬು ಎಬ್ಬಸಿ ಬಿಡ್ತೀರಲ್ಲ ಮಾರಾಯ.. ಯಾಕ್ರಪ್ಪ ಹೀಗೆ ಮಾಡ್ತೀರಾ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪದೇ ಪದೇ ಪಟ್ರೋಲ್, ಡೀಸೆಲ್ ದರ ಹೆಚ್ಚಳ ಬಗ್ಗೆ ಕೇಳ್ತೀರಾ. ನಾನು ಅದಕ್ಕೆ ಏನಾದೂ ಹೇಳಿದ್ರೆ ವಾಟ್ಸಪ್ ಅಲ್ಲಿ ಹಾಕಿ ಗಬ್ಬು ಎಬ್ಬಿಸಿ ಬಿಟ್ತೀರಾ… ಕೇಂದ್ರ ಸರ್ಕಾರ ಜನೌಷಧಿ ಕೇಂದ್ರದಲ್ಲಿ ಸಾವಿರಾರು ರೂಪಾಯಿ ಕಡಿಮೆ ದರದಲ್ಲಿ ಔಷಧಿ ನೀಡುತ್ತಿದೆ. ದೇಶದಾದ್ಯಂತ 80 ಕೋಟಿ ಜನರಿಗೆ ಪಡಿತರ ಅಕ್ಕಿ ಕೊಡುತ್ತಿದೆ. ಅಮೆರಿಕಾದಲ್ಲಿಯೂ ಉಚಿತ ಕೊರೊನಾ ಔಷಧಿ ನೀಡಲ್ಲ. ಆದರೆ, ನಮ್ಮ ದೇಶದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಉಚಿತ ಔಷಧಿ ನೀಡಲಾಗುತ್ತದೆ. ಇಂಥ ಸುದ್ದಿ ಬಗ್ಗೆ ಮಾತನಾಡಲ್ಲ. ಬರೀ ಪೆಟ್ರೋಲ್, ಡಿಸೇಲ್ ಬಗ್ಗೆ ಮಾತನಾಡುತ್ತೀರಿ..! ಕೊರೊನಾ ನಿಯಂತ್ರಣಕ್ಕೆ ಬಂದ ಬಳಿಕ ತೈಲ ಬೆಲ ಕಡಿಮೆ ಆಗಲಿದೆ ಎಂದರು.
ದಾವಣಗೆರೆ ಜಿಲ್ಲೆಗೆ ಸಚಿವ ಸ್ಥಾನ ಸಿಕ್ಕಿಲ್ಲ. ಯಾರಿಗೆ ಸಚಿವ ಸ್ಥಾನ ಬೇಕು. ಅವರು ಹೋಗಿ ನಾಯಕರ ಬಳಿ ಕೇಳಿಕೊಳ್ಳಲಿ. ನನಗೆ ನಾಯಕತ್ವ ವಹಿಸಿಕೊಳ್ಳಿ ಅಂತಾ ಯಾರೂ ಕೇಳಿಲ್ಲ. ಕೇಳಿದ್ರೆ ನಾಯಕತ್ವ ವಹಿಸುತ್ತೇನೆ. ಮಾಯಕೊಂಡದ ಹೆಚ್. ರಾಂಪುರದ ಬಿಂದು ಎಂಬ ಯುವತಿ ರಸ್ತೆ ನಿರ್ಮಾಣ ಆಗಿ ಬಸ್ ಬರೋವವರೆಗೆ ಶಪಥ ಮಾಡಿರುವ ಬಗ್ಗೆ ಡಿಸಿ ಭೇಟಿ ನೀಡಿ ಈಗಾಗಲೇ ಸಮಸ್ಯೆ ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ಇನ್ನೆರಡು ದಿನಲ್ಲಿ ಕೆಲಸ ಕಾರ್ಯಗಳು ಪ್ರಾರಂಭವಾಗಲಿವೆ ಎಂದರು.



