ದಾವಣಗೆರೆ: ಆನ್‌ಲೈನ್ ವಂಚನೆ ಪ್ರಕರಣವೊಂದರಲ್ಲಿ ತಕ್ಷಣ ಕಾರ್ಯಪ್ರವೃತ್ತರಾದ ದಾವಣಗೆರೆಯ ಸಿಇಎನ್ ಅಪರಾಧ ಠಾಣಾ ಪೊಲೀಸರು, ಪ್ರಕರಣ ದಾಖಲಾಗಿ ಒಂದು ಗಂಟೆ ಅವಧಿಯಲ್ಲಿಯೇ ಹಣವನ್ನು ವಾಪಸ್ ಕೊಡಿಸಿದ್ದಾರೆ.
ಸರಸ್ವತಿ ಬಡಾವಣೆಯ ವೆಂಕಟೇಶ್ವರ ರಾವ್ ಗೆ ಬ್ಯಾಂಕ್ ಅಧಿಕಾರಿ ಎಂದು ಕರೆ ಮಾಡಿದ ವ್ಯಕ್ತಿಯೊಬ್ಬ, ನಿಮ್ಮ ಎಟಿಎಂ ಬ್ಲಾಕ್ ಆಗಿದೆ ಎಂದು ಹೇಳಿ ಬ್ಯಾಂಕ್ ಖಾತೆಯ ವಿವರ ಹಾಗೂ ಎಟಿಎಂ ಕಾರ್ಡ್ ನಂಬರ್ ಓಟಿಪಿ ನಂಬರ್ ಪಡೆದುಕೊಂಡು ಖಾತೆಯಿಂದ 2 ಬಾರಿ ಒಟ್ಟು 1 ಲಕ್ಷ ರೂಪಾಯಿ ಹಣವನ್ನು ಆನ್ ಲೈನ್ ಮೂಲಕ ವಂಚನೆ ಮಾಡಿದ್ದನು. ಈ ಬಗ್ಗೆ ವೆಂಕಟೇಶ್ವರ ರಾವ್ ಸಿಇಎನ್ ಅಪರಾಧ ಠಾಣೆಗೆ ದೂರು ನೀಡಿದ್ದರು.
ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ವಂಚನೆಗೆ ಒಳಗಾದವರಿಗೆ ಸುವರ್ಣ ಸಮಯದಲ್ಲಿಯೇ (golden hour) ಗರಿಷ್ಠ 75 ,696 ರೂಪಾಯಿ ಹಣವನ್ನು ವಾಪಸ್ ಕೊಡಿಸಿದ್ದಾರೆ. ಆರೋಪಿತನ ಪತ್ತೆಗಾಗಿ ಸಂಬಂಧಿಸಿದ ವ್ಯಾಲೆಟ್ ಮತ್ತು ಬ್ಯಾಂಕ್ ಗಳಿಗೆ ಆರೋಪಿತನ ಖಾತೆಯಲ್ಲಿದ್ದ 75,696 ರೂಪಾಯಿ ಹಣವನ್ನು ಫ್ರೀಜ್ ಮಾಡಿಸಿ, ನಂತರ ಘನ ನ್ಯಾಯಾಲಯಕ್ಕೆ ವರದಿ ಸಲ್ಲಿಸಿ, ದೂರುದಾರಿಗೆ ಹಣವನ್ನು ನೀಡಲು ಬ್ಯಾಂಕ್‌ಗಳಿಗೆ ನ್ಯಾಯಾಲಯ ಆದೇಶ ಮಾಡಿರುತ್ತದೆ.
ಸೈಬರ್ ಅಪರಾಧ ಪ್ರಕರಣಗಳಂತಹ ಸೂಕ್ಷ್ಮ ಪ್ರಕರಣಗಳಲ್ಲಿ ತುರ್ತಾಗಿ ತನಿಖೆ ನಡೆಸಿ ದೂರುದಾರಿಗೆ ಹಣ ವಾಪಾಸ್ಸು ಕೊಡಿಸುವಲ್ಲಿ ಸಿ.ಇ.ಎನ್ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ಕಾರ್ಯ ನಿರ್ವಹಿಸಿದ್ದಾರೆ.
ಸೈಬರ್ ಅಪರಾಧ ಮಾಹಿತಿ ವರದಿ(ಸಿಐಆರ್) ಅನ್ನು ತುರ್ತು ಸ್ಪಂದನ ವ್ಯವಸ್ಥೆ (ಇಆರ್‌ಎಸ್‌ಎಸ್) ೧೧೨ ಮೂಲಕ ದೂರು ಸಲ್ಲಿಸಬಹುದಾಗಿರುತ್ತದೆ. ಸೈಬರ್ ಅಪರಾಧಗಳು ಸಂಭವಿಸಿದ ತಕ್ಷಣವೇ ಸೈಬರ್ ಅಪರಾದಗಳ ಸುವರ್ಣ ಸಮಯ (ಒಂದು ಗಂಟೆ ಒಳಗೆ ) ತುರ್ತು ಸಹಾಯವಾಣಿ 112ಕ್ಕೆ ಕರೆಮಾಡಿ. ಕೂಡಲೇ ಸೈಬರ್ ಆರೋಪಿ ಬ್ಯಾಂಕ್ ಖಾತೆಯ ಚಾಲನೆಯನ್ನು ತಡೆಹಿಡಿಯಬಹುದಾಗಿರುತ್ತದೆ. ಸಾರ್ವಜನಿಕರು ಸೈಬರ್ ಅಪರಾಧಗಳು ಘಟಿಸಿದ ಒಂದು ಗಂಟೆಯ ಅವಧಿಯನ್ನು ಸುವರ್ಣ ಸಮಯದಲ್ಲಿ ಹಾಯವಾಣಿ 112ಗೆ ಕರೆಮಾಡುವ ಮೂಲಕ ತಮ್ಮ ಹಣವನ್ನು ರಕ್ಷಿಸಿಕೊಳ್ಳುವ ಅವಕಾಶವಿರುತ್ತದೆ ಎಂದು ಪೊಲೀಸರು ತಿಳಿಸಿದ್ಧಾರೆ.



