ದಾವಣಗೆರೆ: ಸುಪ್ರೀಂ ಕೋಟ್ ಅನಧಿಕೃತ ದೇವಸ್ಥಾನ ತೆರವುಗೊಳಿಸುವಂತೆ ಆದೇಶ ನೀಡಿದ್ದು, ಜಿಲ್ಲೆಯಲ್ಲಿ 24 ಅನಧಿಕೃತ ದೇವಸ್ಥಾನಗಳಿವೆ. ಇವುಗಳಲ್ಲಿ ಈಗಾಗಲೇ 13 ಕಟ್ಟಡಗಳನ್ನು ತೆರವುಗೊಳಿಸಲಾಗಿದೆ. ಇನ್ನುಳಿದ ಹನ್ನೊಂದು ಕಟ್ಟಡ ತೆರವುಗೊಳಿಸುವ ಕುರಿತು ದೇವಸ್ಥಾನಗಳ ಪ್ರಮುಖರ ಜೊತೆ ಮಾತನಾಡಿ ತೆರವುಗೊಳಿಸಸುತ್ತೇವೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕ ಸ್ಥಳ, ಪಾರ್ಕ್,ರಸ್ತೆಯಲ್ಲಿ ಅನಧಿಕೃತವಾಗಿ ಧಾರ್ಮಿಕ ಕೇಂದ್ರಗಳನ್ನು ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್ ಹಾಗೂ ಗೃಹ ಇಲಾಖೆಯ ಆದೇಶಿಸಿದೆ. ಈ ಬಗ್ಗೆ 20 ದಿನಗಳ ಕಾಲ ಸಮಯಾವಕಾಶ ನೀಡಲಾಗಿದೆ. ಹೀಗಾಗಿ 2009ಕ್ಕಿಂತ ಮುಂಚೆ ಅನಧಿಕೃತವಾಗಿ ಕಟ್ಟಲಾಗಿರುವ ಕಟ್ಟಡಗಳ ತೆರವು ಮಾಡಲಾಗುವುದು. ಜಿಲ್ಲೆಯ ಅನಧಿಕೃತ ಕಟ್ಟಡ ತೆರವಿನ ಬಗ್ಗೆ ದೇವಸ್ಥಾನಗಳ ಪ್ರಮುಖರ ಜೊತೆ ಮಾತನಾಡಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ. ಸಕ್ರಮಗೊಳಿಸಲು ಅವಕಾಶವಿದ್ದರೆ ಸಕ್ರಮಗೊಳಿಸುತ್ತೇವೆ ಎಂದು ತಿಳಿಸಿದರು.
ದಾವಣಗೆರೆಯಲ್ಲಿ 7, ಚನ್ನಗಿರಿ ಹಾಗೂ ಹರಿಹರದಲ್ಲಿ ತಲಾ 2 ದೇವಸ್ಥಾನಗಳು ಅನಧಿಕೃತವಾಗಿದ್ದು, 60ರಿಂದ 70 ವರ್ಷಗಳ ಹಳೆಯದಾದ ದೇಗುಲಗಳು ಇವಾಗಿವೆ. ಸೆ. 20ರೊಳಗೆ ವರದಿ ನೀಡುವಂತೆ ಆಯಾ ತಾಲೂಕು ಆಡಳಿತಕ್ಕೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದರು.



