ಡಿವಿಜಿ ಸುದ್ದಿ, ದಾವಣಗೆರೆ: ಈ ಬಾರಿಯ ಮಹಾನಗರ ಪಾಲಿಕೆಗೆ ನ. 12 ರಂದು ಚುನಾವಣೆ ನಡೆಯಲಿದ್ದು ನಾಮಪತ್ರ ಸಲ್ಲಿಸಲು ಇನ್ನೆರೆಡು ದಿನ ಮಾತ್ರ ಬಾಕಿ ಉಳಿದಿದ್ದು, ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಸೇರಿದಂತೆ ಪ್ರಾದೇಶಿಕ ಪಕ್ಷಗಳಲ್ಲಿ ಬಂಡಾಯ ಅಭ್ಯರ್ಥಿಗಳದ್ದೆ ಚಿಂತೆಯಾಗಿದೆ.
ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮತ್ತು ಸ್ಥಳೀಯ ಪಕ್ಷಗಳು ಇನ್ನು ಟಿಕೆಟ್ ಅಂತಿಮಗೊಳಿಸಿಲ್ಲ. ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರ ಮನೆ ಕಚೇರಿಗಳಲ್ಲಿ ಅಭ್ಯರ್ಥಿಗಳು ಟಿಕೆಟ್ ಗಿಟ್ಟಿಸಲು ಹರಸಾಹಸ ನಡೆಸುತ್ತಿದ್ದಾರೆ. ಒಂದೊಂದು ವಾರ್ಡ್ ನಲ್ಲಿ 5ಕ್ಕಿಂತಲೂ ಹೆಚ್ಚು ಸ್ಪರ್ಧಾ ಆಕಾಂಕ್ಷಿಗಳಾಗಿರುವುದರಿಂದ ಯಾರನ್ನು ಆಯ್ಕೆ ಮಾಡಬೇಕು ಎನ್ನುವ ಗೊಂದಲದಲ್ಲಿ ಪಕ್ಷದ ವರಿಷ್ಠರಿದ್ದಾರೆ.
ಒಂದೆಡೆ ದೀಪಾವಳಿ ಸಂಭ್ರಮವಾದ್ರೆ, ಇನ್ನೊಂದೆಡೆ ಪಾಲಿಕೆ ಚುನಾವಣೆಯಲ್ಲಿ ಅಸಮಾಧಾನ ಸ್ಫೋಟಗೊಳ್ಳುವ ಸಾಧ್ಯತೆ ಇದೆ. ಟಿಕೆಟ್ ಹಂಚಿಕೆ ನಂತರ ಸ್ಪೋಟಗೊಳ್ಳುವ ಬಂಡಾಯ ರಾಷ್ಟ್ರೀಯ ಪಕ್ಷಗಳಿಗೆ ಸವಾಲ್ ಆಗಿ ಪರಿಣಮಿಸಿದೆ.
ದೀಪಾವಳಿ ಮಧ್ಯೆಯು ಆಕಾಂಕ್ಷಿಗಳು ಊಟ ತಿಂಡಿ ಬಿಟ್ಟು, ಪಕ್ಷದ ವರಿಷ್ಠರ ಸೂಚನೆಗಾಗಿ ಆಕಾಂಕ್ಷಿಗಳು ಭಕಪಕ್ಷಿಗಳ ರೀತಿ ಕಾಯುತ್ತಿದ್ದಾರೆ. ನಿಮಗೆ ಟಿಕೆಟ್ ನೀಡುತ್ತೇವೆ ಎಂದರು ಆಕಾಂಕ್ಷಿಗಳಿಗೆ ಅಧಿಕೃತ ಬಿ ಫಾರಂ ಬರುವವರೆಗು ನಂಬಿಕೆ ಇಲ್ಲ.
ವರಿಷ್ಠರು ಕನ್ಪರ್ಮ್ ಮಾಡಿದ ಮೇಲು ಕೊನೆ ಕ್ಷಣದ ಬದಲಾವಣೆ ಬಗ್ಗೆ ಆತಂಕ ದುಗುಡವಿದೆ. ಎರಡು ಪಕ್ಷಗಳಲ್ಲೂ ಇದೇ ಮನಸ್ಥಿತಿ ಇದ್ದು ಟಿಕೇಟ್ ಪಡೆಯುವ ಆಕಾಂಕ್ಷಿಗಳಿಗೆ ದೀಪಾವಳಿ ಹಬ್ಬದ ಸಡಗರವಿಲ್ಲ. ಇಂದು ಮತ್ತು ನಾಳೆ ಬಿಜೆಪಿ ಕಾಂಗ್ರೆಸ್ ಪಕ್ಷದ ಆಕಾಂಕ್ಷಿಗಳಿಗೆ ನಿರ್ಣಾಯಕ ದಿನ.
ಈ ಸಮಯದಲ್ಲಿ ಮೈಮರೆತರೆ ಐದು ವರ್ಷ ಅಪೂರ್ವ ಅವಕಾಶ ತಪ್ಪಿ ಹೋಗುತ್ತದೆ ಎಂದು ಟಿಕೆಟ್ ಗಾಗಿ ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ಹೊರೆಗೆ ದೀಪಾವಳಿ ಪಟಾಕಿ ಸದ್ದು ಆಕಾಂಕ್ಷಿಗಳಿಗೆ ಮನಸ್ಸಿನಲ್ಲಿಯೇ ಪಟಾಕಿಗಳು ಕ್ಷಣ ಕ್ಷಣಕ್ಕೂ ಸಿಡಿಯುತ್ತಿವೆ…