ದಾವಣಗೆರೆ: ದಾವಣಗೆರೆ ಸುತ್ತಮುತ್ತಲಿನ ಭಾಗಕ್ಕೆ ಅನುಕೂಲ ಆಗುವಂತೆ ವಿಜಯಪುರ-ಮಂಗಳೂರು ರೈಲಿನ ಸಮಯದಲ್ಲಿ ಬದಲಾವಣೆ ಮಾಡಬೇಕು ಎಂದು ದಾವಣಗೆರೆ – ಕರಾವಳಿ ರೈಲ್ವೆ ಹೋರಾಟ ಸಮಿತಿ ಆಗ್ರಹಿಸಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ನಿರ್ಮಲ್ ರಾಜೇಂದ್ರ ಹಾಗೂ ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ನಾಯರಿ ಅವರು, ಪ್ರತಿ ದಿನ ವಿಜಯಪುರದಿಂದ ರಾತ್ರಿ 3 ಗಂಟೆಗೆ ಹೊರಟ ವಿಜಯಪುರ-ಮಂಗಳೂರು ರೈಲು ಮರುದಿನ ಬೆಳಗ್ಗೆ 11.30ಕ್ಕೆ ಮಂಗಳೂರು, ಉಡುಪಿ ತಲುಪುತ್ತಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ದಾವಣಗೆರೆ-ಹರಿಹ ಭಾಗದಿಂದ ಪ್ರತಿ ದಿನ ನೂರಾರು ಜನ ಆಸ್ಪತ್ರೆಗಾಗಿ ಮಂಗಳೂರು ಮಣಿಪಾಲ್ ಸೇರಿದಂತೆ ಇತರೆ ಆಸ್ಪತ್ರೆಗಳಿಗೆ ಬಸ್ ಗಳಲ್ಲಿ ದುಬಾರಿ ದರ ಕೊಟ್ಟು ಹೋಗುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ವಿಜಯಪುರದಿಂದ ಹೊರಟ ರೈಲು ದಾವಣಗೆರೆ ರಾತ್ರಿ 8 ಗಂಟೆಗೆ ಬಂದು, ಬೆಳಗ್ಗೆ ಸರಿಯಾಗಿ 6 ಗಂಟೆಗೆ ಮಂಗಳೂರು ತಲುಪುವಂತೆ ವ್ಯವಸ್ಥೆ ಮಾಡಬೇಕು .ಮಧ್ಯ ಕರ್ನಾಟಕ ದಾವಣಗೆರೆ ಮತ್ತು ಸುತ್ತಮುತ್ತಲಿನ ಭಾಗದ ಪ್ರದೇಶಗಳಿಂದ ಉಡುಪಿ, ಮಂಗಳೂರಿಗೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪ್ರಯಾಣಿಸುತ್ತಾರೆ. ಹೆಚ್ಚಾಗಿ ವೈದ್ಯಕೀಯ ಚಿಕಿತ್ಸೆಗಾಗಿಯೇ ಜನರು ಪ್ರಯಾಣಿಸುತ್ತಾರೆ. ಇದಲ್ಲದೆ, ವಿದ್ಯಾರ್ಥಿಗಳು, ವ್ಯವಹಾರಸ್ಥರು, ಹೋಟೆಲ್ ಕಾರ್ಮಿಕರು ಓಡಾಡುತ್ತಾರೆ. ಹೀಗಾಗಿ ಸಂಸದರು ಈ ನಿಟ್ಟಿನಲ್ಲಿ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದ್ಧಾರೆ.