ದಾವಣಗೆರೆ: ಅಬಕಾರಿ ಇಲಾಖೆಯ ಸಹಯೋಗದೊಂದಿಗೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸರ್ವೇಕ್ಷಣಾಧಿಕಾರಿ ಹಾಗೂ ಕಾರ್ಯಕ್ರಮಾಧಿಕಾರಿ ರಾಘವನ್.ಜಿ.ಡಿ ಅವರನ್ನು ಒಳಗೊಂಡ ತಂಡ ಫೆ.25 ರಂದು ಬಾರ್ & ರೆಸ್ಟೋರೆಂಟ್‍ಗಳ ಮೇಲೆ ದಾಳಿ ನಡೆಸಿ, ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
30 ಕ್ಕಿಂತ ಹೆಚ್ಚು ಆಸನಗಳಿರುವ ಬಾರ್ & ರೆಸ್ಟೋರೆಂಟ್‍ಗಳಲ್ಲಿ ನಿರ್ದಿಷ್ಟ ಧೂಮಪಾನ ವಲಯ ಸ್ಥಾಪಿಸುವುದು ಹಾಗೂ ಬಾರ್‍ಗಳ ವ್ಯಾಪ್ತಿಯಲ್ಲಿ ಟೇಬಲ್‍ಗಳ ಮೇಲೆ ಸಿಗರೇಟು ಒದಗಿಸದಂತೆ ಮಾಲೀಕರು ಜವಾಬ್ದಾರಿಯಿಂದ ಎಚ್ಚರಿಕೆ ವಹಿಸಬೇಕು ಅಲ್ಲದೆ ಎಲ್ಲಾ ರೆಸ್ಟೋರೆಂಟ್‍ಗಳಲ್ಲಿರುವ ಕೆಲಸಗಾರರು ಕಡ್ಡಾಯವಾಗಿ ಪ್ರತಿ 15 ದಿನಕ್ಕೊಮ್ಮೆ ಕೋವಿಡ್-19 ಪರೀಕ್ಷೆಯನ್ನು ಮಾಡಿಸಬೇಕೆಂದು ಸೂಚಿಸಿದರು.
ಕೋಟ್ಪಾ ಸೆಕ್ಷನ್-4 ರ ಅಡಿಯಲ್ಲಿ ನಿಯಮ ಉಲ್ಲಂಘನೆಯ 23 ಪ್ರಕರಣಗಳಿಗೆ ರೂ. 2300, ಸೆಕ್ಷನ್-6ಎ ಅಡಿಯಲ್ಲಿ 2 ಪ್ರಕರಣಕ್ಕೆ ರೂ. 200 ಸೇರಿದಂತೆ ಒಟ್ಟು 25 ಪ್ರಕರಣಗಳಿಗೆ 2500 ರೂ ದಂಡ ವಸೂಲಾಗಿದೆ ಎಂದರು. ದಾಳಿಯಲ್ಲಿ ಅಬಕಾರಿ ನಿರೀಕ್ಷಕ ವಿನೋದ್.ಬಿ ಕಾಳಪ್ಪಗೋಳ್, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಸತೀಶ್ ಕಲಹಾಳ್, ಸಮಾಜ ಕಾರ್ಯಕರ್ತ ದೇವರಾಜ್.ಕೆ.ಪಿ, ಅಬಕಾರಿ ಇಲಾಖೆಯ ಸಬ್‍ಇನ್ಸ್‍ಪೆಕ್ಟರ್ ಶಂಕರಪ್ಪ, ಕಾನ್ಸ್‍ಟೇಬಲ್ ಶಿವರಾಜ್ ಪಾಟೀಲ್ ಹಾಜರಿದ್ದರು.



