ದಾವಣಗೆರೆ: ಜನಸ್ಪಂದನ ಕಾರ್ಯಕ್ರಮ ನಡೆಸುವುದರಿಂದ ಜನರಿಗೆ, ಸರ್ಕಾರ ಹಾಗೂ ಜಿಲ್ಲಾಡಳಿತ ನಮ್ಮ ನೆರವಿಗೆ ಇದೆ ಎಂಬ ಭಾವನೆ ಬಂದಿದೆ. ಪ್ರತಿ ಅರ್ಜಿದಾರರ ಸಮಸ್ಯೆಗಳನ್ನು ಆಲಿಸಿ, ಸಮಸ್ಯೆ ಪರಿಹರಿಸಲು ಎಲ್ಲಾ ಇಲಾಖೆ ಅಧಿಕಾರಿಗಳು ಶ್ರಮಿಸಬೇಕು. ಮುಂದಿನ ದಿನಗಳಲ್ಲಿ 15 ದಿನಕ್ಕೊಮ್ಮೆ ಜನಸ್ಪಂದನ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಜನಸ್ಪಂದನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಧಿಕಾರಿಗಳಲ್ಲಿ ಸಕಾರಾತ್ಮಕ ಮನೋಭಾವನೆ ಇರಬೇಕು. ಎಷ್ಟೋ ಸಮಸ್ಯೆಗಳನ್ನು ಮಾತಿನಿಂದ ಪರಿಹರಿಸಬಹುದು. ಹೀಗಿರುವಾಗ ಯಾವುದೇ ಸಮಸ್ಯೆಯಾಗಲೀ ತನ್ನಿಂದ ಆಗುವುದಿಲ್ಲ ಎನ್ನುವ ಬದಲು ಪರಿಶೀಲನೆ ನಡೆಸುತ್ತೇವೆ ಎಂದರೆ ಸಾರ್ವಜನಿಕರಲ್ಲಿ ಅಧಿಕಾರಿಗಳ ಮೇಲೆ ಆಶಾಭಾವನೆ ಬೆಳೆಯುತ್ತದೆ ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಆನಗೋಡು ಹೋಬಳಿ ನೇರಿಗೆ ಗ್ರಾಮದಲ್ಲಿ ಕೃಷಿ ಸಹಾಯಕರ ವಾಸಕ್ಕಾಗಿ ಸರ್ಕಾರದಿಂದ ವಸತಿ ಗೃಹವನ್ನು ನಿರ್ಮಿಸಿದ್ದು, ಇತ್ತೀಚೆಗೆ ಈ ಹುದ್ದೆಯನ್ನು ರದ್ದು ಮಾಡಲಾಯಿತು. ಪ್ರಸ್ತುತ ಈ ಜಾಗದಲ್ಲಿ ಖಾಸಾಗಿ ವ್ಯಕ್ತಿಯೊಬ್ಬರು ವಾಸಮಾಡುತ್ತಿದ್ದು, ಬಾಡಿಗೆಯನ್ನು ನೀಡುತ್ತಿಲ್ಲ. ಅವರನ್ನು ಕೂಡಲೇ ಈ ಜಾಗದಿಂದ ಖಾಲಿ ಮಾಡಿಸಿ ಇಲ್ಲಿ ಅಂಚೆ ಕಚೇರಿ, ಗ್ರಾಮ ಲೆಕ್ಕಾಧಿಕಾರಿ ಅಥವಾ ಪಶು ಚಿಕಿತ್ಸಾಲಯ ಕಚೇರಿಗಳ ಪೈಕಿ ಯಾವುದಾದರು ಒಂದನ್ನು ಈ ಜಾಗಕ್ಕೆ ಸ್ಥಳಾಂತರ ಮಾಡಬೇಕು ಎಂದು ಗ್ರಾಮಸ್ಥರೊಬ್ಬರು ಅರ್ಜಿ ಸಲ್ಲಿಸಿದರು. ಇದಕ್ಕೆ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ವೆಂಕಟೇಶ್‍ನಾಯ್ಕ್ ಅರ್ಜಿ ಸಲ್ಲಿಸಿ ದಿನಗೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದು, ನನ್ನ ಹೆಂಡತಿ ಮೂಕಿ ಹಾಗೂ ಕಿವುಡಿಯಾಗಿದ್ದಾಳೆ. ಒಂದುವರೆ ವರ್ಷದ ಮಗನಿಗೆ ಕಣ್ಣಿನ ತೊಂದರೆಯಿದ್ದು ತುರ್ತಾಗಿ ಶಸ್ತ್ರಚಿಕಿತ್ಸೆ ಮಾಡಿಸಬೇಕು. ಆಸ್ಪತ್ರೆಯಲ್ಲಿ ಗುರುತಿನ ಚೀಟಿ, ರೇಷನ್‍ಕಾರ್ಡ್, ಆಧಾರ್‍ಕಾರ್ಡ್‍ಗಳನ್ನು ಕೇಳುತ್ತಿದ್ದು, ತಮ್ಮ ಬಳಿ ಇದ್ಯಾವುದೇ ಅಗತ್ಯ ದಾಖಲೆಗಳಿಲ್ಲ ಎಂದು ಸಮಸ್ಯೆ ಕುರಿತು ಹೇಳುವಾಗ, ಜಿಲ್ಲಾಧಿಕಾರಿ ಮೊದಲು ಆಧಾರ್‍ಕಾರ್ಡ್, ಬಿಪಿಎಲ್ ಕಾರ್ಡ್ ಮಾಡಿಸಿಕೊಳ್ಳಿ ತದನಂತರ ನಿಮ್ಮ ಮಗನ ಚಿಕಿತ್ಸೆ ನಡೆಯುತ್ತದೆ ಎಂದು ಭರವಸೆ ನೀಡಿದರು.
ಶಿವಕುಮಾರ್ ಸ್ವಾಮಿ ಲೇಔಟ್, 2ನೇ ಹಂತದ, 8ನೇ ಕ್ರಾಸ್, ಡಾಬಾ ಸ್ಟಾಪ್ ಹತ್ತಿರವಿರುವ ನಗರಾಭಿವೃದ್ಧಿ ಪ್ರಾಧಿಕಾರದಿಂದ ಪಾರ್ಕ್ ಆಗಿ ಅನುಮೋದಿತಗೊಂಡಿರುವ ಜಾಗದಲ್ಲಿ ಬಂಜಾರ ಸಮುದಾಯದವರು ದೇವಸ್ಥಾನ ನಿರ್ಮಿಸಿ 2 ಬಾವುಟಗಳನ್ನು ಹಾರಿಸಿದ್ದಾರೆ. ಸಾರ್ವಜನಿಕ ಉದ್ಯಾನವನದ ಜಾಗ ದುರ್ಬಳಕೆ ಮಾಡಿಕೊಂಡಿದ್ದು ಕೂಡಲೇ ದೇವಸ್ಥಾನವನ್ನು ತೆರವುಗೊಳಿಸಿ ಪಾರ್ಕ್ ಆಗಿ ಉಳಿಸಿಕೊಡಬೇಕು ಎಂದು ಬಡಾವಣೆಯ ನಿವಾಸಿಗಳು ಮನವಿ ಸಲ್ಲಿಸಿದರು.ಜಿಲ್ಲಾಧಿಕಾರಿ ಕೂಡಲೇ ಪರಿಶೀಲನೆ ನಡೆಸಿ ವರದಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಎಸ್.ಎಸ್.ಬಡಾವಣೆ ‘ಎ’ ಬ್ಲಾಕ್ ನೇತಾಜಿ ಸುಭಾಷ್‍ಚಂದ್ರಬೋಸ್ ಒಳಾಂಗಣ ಕ್ರೀಡಾಂಗಣದ ಎದುರು ಇರುವ ವಿದ್ಯುತ್ ಟ್ರಾನ್ಸ್‍ಫರ್ಮರ್ ಮತ್ತು ಕಂಬಗಳನ್ನು ಸ್ಥಳಾಂತರಿಸಿ, ಇದನ್ನು ಸೈಟ್ ನಂ.30, ಡೋರ್ ನಂಬರ್ 3989, 11ನೇ ಮುಖ್ಯ ರಸ್ತೆಗೆ ಮರುಸ್ಥಾಪಿಸಲು ಉದ್ದೇಶಿಸಲಾಗಿದೆ. ಆದರೆ ಈ ರಸ್ತೆಯು 20 ಅಡಿ ಅಗಲವಿದ್ದು, ಇದರಲ್ಲಿ ಚರಂಡಿ, ನೀರಿನ ಪೈಪ್‍ಲೈನ್, ಮತ್ತು ಯುಜಿಡಿ ಪೈಪ್‍ಲೈನ್ ಇದ್ದು, ಅರಣ್ಯ ಇಲಾಖೆಯ ಅನುಮತಿ ಇಲ್ಲದೇ ಈಗಾಗಲೇ ಹೊಂಗೆ ಮರವನ್ನು ಕಡಿದಿದ್ದಾರೆ. ಸದರಿ ರಸ್ತೆಯಲ್ಲಿ ಬಹಳ ಜನ ಮತ್ತು ವಾಹನ ಸಂಚಾರವಿರುವುದರಿಂದ ಹಾಲಿ ಇರುವ ಅಂದರೆ ಒಳಾಂಗಣ ಕ್ರೀಡಾಂಗಣದ ಎದುರಿನಲ್ಲಿರುವ 80 ಅಡಿ ರಸ್ತೆಯಲ್ಲಿ ಎಲ್ಲಿ ಬೇಕಾದರೂ ವಿದ್ಯುತ್ ಟ್ರಾನ್ಸ್‍ಫಾರ್ಮರ್‍ನ್ನು ಮರುಸ್ಥಾಪಿಸಬೇಕು ಎಂದು ಬಡಾವಣೆ ನಿವಾಸಿಗಳು ಮನವಿ ಮಾಡಿದರು.
ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ ಈ ಸ್ಥಳಕ್ಕೆ ಸ್ವತಃ ನಾನು ಖುದ್ದಾಗಿ ಭೇಟಿ ನೀಡಿದ್ದು ಸಮಸ್ಯೆಯ ಬಗ್ಗೆ ತಿಳುವಳಿಕೆ ಇದೆ ಎಂದ ಅವರು 80 ಅಡಿ ರಸ್ತೆಯಲ್ಲೆ ಟ್ರ್ಯಾನ್ಸ್‍ಫಾರ್ಮ್ ಮರುಸ್ಥಾಪಿಸಲು ಕೆಇಬಿ ಅಧಿಕಾರಿಗೆ ನಿರ್ದೇಶಿಸಿದರು.
ಬೂದಳ್ ರಸ್ತೆಯಲ್ಲಿರುವ ಆಶ್ರಯ ಮನೆಗಳ ಪೈಕಿ ಮನೆ ನಂ.6ರ ಮೇಲೆ ಏರ್‍ಟೇಲ್ ನೆಟ್‍ವರ್ಕ್ ಟವರ್ ಹಾಕುತ್ತಿರುವುದು ಗಮನಕ್ಕೆ ಬಂದಿದೆ. ಹೀಗಾದಲ್ಲಿ ಅಕ್ಕಪಕ್ಕದ ನಿವಾಸಿಗಳ ಆರೋಗ್ಯದ ಮೇಲೆ ತೊಂದರೆಯುಂಟಾಗುತ್ತದೆ. ಆದ್ದರಿಂದ ಇದನ್ನು ತಡೆ ಹಿಡಿಯಬೇಕು ಎಂದು ವ್ಯಕ್ತಿಯೊಬ್ಬರು ಮನವಿ ಮಾಡಿದರು. ಇದಕ್ಕೆ ಜಿಲ್ಲಾಧಿಕಾರಿಗಳು ಪಾಲಿಕೆ ಆಯುಕ್ತರಿಗೆ ಸೂಚಿಸಿ ಸಮಸ್ಯೆ ಪರಿಹರಿಸುತ್ತೇವೆ ಎಂದು ತಿಳಿಸಿದರು.
ಕೆ.ಬಿ.ಪ್ರಕಾಶ್ ಅರ್ಜಿ ಸಲ್ಲಿಸಿ ರಸ್ತೆ ಅಪಘಾತದಲ್ಲಿ ತಮ್ಮ ಎಡಗಾಲನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದು, ಚನ್ನಗಿರಿ ಆಸ್ಪತ್ರೆಯ ವೈದ್ಯರು ಮೆಡಿಕಲ್ ವರದಿಯಲ್ಲಿ ಶೇ.60 ರಷ್ಟು ಅಂಗನ್ಯೂನತೆ ಎಂದು ನಮೂದಿಸಿದ್ದಾರೆ. ಅದನ್ನು ಶೇಕಡಾ.75ರಷ್ಟು ಅಂಗನ್ಯೂನ್ಯತೆಗೆ ಹೆಚ್ಚಿಸಿ ಪರಿಹಾರ ಒದಗಿಸಬೇಕೆಂದು ಕೋರಿದರು. ಜಿಲ್ಲಾಧಿಕಾರಿ ಅವರನ್ನು ಸ್ಥಳದಲ್ಲೇ ಪರಿಶೀಲಿಸಿ ಇವರಿಗೆ ಕೂಡಲೇ ಶೇಕಡಾ. 75 ರಷ್ಟು ಅಂಗನ್ಯೂನತೆಗೆ ಹೆಚ್ಚಿಸಿ ಎಂದು ಆರೋಗ್ಯಾಧಿಕಾರಿಗೆ ಸೂಚಿಸಿದರು.
ವಿದ್ಯಾರ್ಥಿ ಮಯೂರ್ ಬಿಸೆ ಅರ್ಜಿ ಸಲ್ಲಿಸಿ ಪಿಯುಸಿಯಲ್ಲಿ ಶೇಕಡ 84ರಷ್ಟು ಫಲಿತಾಂಶ ಹೊಂದಿ ಇಂಜಿನಿಯರಿಂಗ್ ಮಾಡುತ್ತಿದ್ದು, ನನ್ನ ತಂದೆ ಒಂದು ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದಾರೆ. ಇದೀಗ ನಾನು ಇಂಜಿನಿಯರಿಂಗ್ ಮಾಡುತ್ತಿದ್ದು ನನಗೆ ಬಿಸಿಎಂ ಹಾಸ್ಟೆಲ್ ಅಲ್ಲಿ ಸೀಟ್ ಸಿಗದ ಕಾರಣ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ ಎಂದರು. ಇದಕ್ಕೆ ಜಿಲ್ಲಾಧಿಕಾರಿ ನಿನ್ನ ತಂದೆಯೊಂದಿಗೆ ನೀನು ಕೃಷಿಯಲ್ಲಿ ತೊಡಗಿಕೊಂಡು ನಿಮ್ಮ ಜಮೀನನ್ನು ಉನ್ನತಿಕರಣಗೊಳಿಸಬಹುದು ಎಂಬ ಸಲಹೆಗೆ ವಿದ್ಯಾರ್ಥಿ ಪ್ರತಿಕ್ರಿಯಿಸಿ ನನ್ನ ತಂದೆ ನನ್ನ ಹಾಗೆ ನೀನು ಕಷ್ಟಪಡಬೇಡ. ಉನ್ನತ ಮಟ್ಟದ ವಿದ್ಯಾಭ್ಯಾಸ ಪಡೆದು ಉದ್ಯೋಗ ಪಡೆದುಕೊಳ್ಳಬೇಕು ಎಂದಿದ್ದಾರೆ ಎಂದು ತಿಳಿಸಿದ. ಅದಕ್ಕೆ ಜಿಲ್ಲಾಧಿಕಾರಿಗಳು ಹಿಂದುಳಿದ ವರ್ಗಗಳ ಅಧಿಕಾರಿಗಳಿಗೆ ಸೂಚನೆ ನೀಡಿ ಈ ವಿದ್ಯಾರ್ಥಿಗೆ ಕೂಡಲೇ ಹಾಸ್ಟೆಲ್ ಸಿಗುವಂತೆ ನೋಡಿಕೊಳ್ಳಿ ಎಂದು ಆದೇಶಿಸಿದರು.
ಇದೇ ವೇಳೆ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎಸ್.ಆರ್.ಗಂಗಪ್ಪ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜನಾಯ್ಕ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ರೇಷ್ಮ ಕೌಸರ್ ಮನವಿ ಮಾಡಿ, ಶಾಮನೂರಿಗೆ ಇರುವ ನಗರ ಸಾರಿಗೆಯನ್ನ ಜೆ.ಹೆಚ್.ಪಟೇಲ್ ಬಡಾವಣೆಯ ಮಹಿಳಾ ವಿದ್ಯಾರ್ಥಿ ನಿಲಯದವರೆಗೆ ವಿಸ್ತರಿಸಿದರೆ ವಿದ್ಯಾರ್ಥಿಗಳಿಗೆ ಹಾಗೂ ಸ್ಥಳೀಯ ನಾಗರೀಕರಿಗೆ ಅನುಕೂಲವಾಗುವುದಾಗಿ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಕೆಎಸ್‍ಆರ್‍ಟಿಸಿ ಅಧಿಕಾರಿಗೆ ಸೂಚನೆ ನೀಡಿ ಈ ಬೇಡಿಕೆ ಕಳೆದ ವರ್ಷದಿಂದ ಇದ್ದು, ಈ ಕೂಡಲೇ ಅಂದರೆ ನಾಳೆಯಿಂದ ಅಲ್ಲಿಗೆ ಬಸ್ ಸಂಚಾರವನ್ನು ವಿಸ್ತರಿಸಲು ಆದೇಶಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ವಿಜಯ್ ಮಹಾಂತೇಶ್ ದಾನಮ್ಮನವರ್, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಉಪವಿಭಾಗಧಿಕಾರಿ ಮಮತ ಹೊಸಗೌಡರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ದೂಡ ಆಯುಕ್ತ ಬಿ.ಟಿ.ಕುಮಾರಸ್ವಾಮಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.