ಡಿವಿಜಿಸುದ್ದಿ. ಕಾಂ, ಹರಿಹರ : ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ನೂತನವಾಗಿ ಅಳವಡಿಸಿರುವ 15 ಲಕ್ಷ ವೆಚ್ಚದ ಅರಿವಳಿಕೆ (ಅನಸ್ತೇಶಿಯಾ) ಮತ್ತು 47 ಲಕ್ಷದ ಕ್ಷಯರೋಗಿಗಳ ಕಫಾ ಪರೀಕ್ಷೆ (ಸಿಬಿ-ನ್ಯಾಟ್) ಯಂತ್ರಗಳನ್ನು ಶಾಸಕ ಎಸ್.ರಾಮಪ್ಪ ಚಾಲನೆ ನೀಡಿದರು.
ಚಾಲನೆ ನಂತರ ಮಾತನಾಡಿ ಅವರು, ವಿದೇಶಿ ತಂತ್ರಜ್ಞಾನ ಹೊಂದಿರುವ ಯಂತ್ರೋಪಕರಣಗಳ ಸೌಲಭ್ಯಗಳನ್ನು ಕ್ಷೇತ್ರದ ಬಡವರಿಗೆ ತಲುಪಿಸುವಲ್ಲಿ ಸಿಬ್ಬಂದಿ ಯಾವುದೇ ರೀತಿಯ ಸಬೂಬು ಹೇಳದೆ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿ. ಸರ್ಕಾರದ ಈ ಯೋಜನೆಗಳು ಬಡವರಿಗೆ ತಲುಪಿದಂತಾಗಲಿ ಎಂದು ಹೇಳಿದರು.

ಮುಖ್ಯ ವೈದ್ಯಾಧಿಕಾರಿ ಎಲ್.ಹನುಮಾನಾಯಕ್ ಮಾತನಾಡಿ, ಅರವಳಿಕೆ ಯಂತ್ರದ ಸಹಾಯದಿಂದ ಶಸ್ತ್ರ ಚಿಕಿತ್ಸೆಯ ಸಂದರ್ಭದಲ್ಲಿ ರೋಗಿಗಳಿಗೆ ಎಷ್ಟು ಪ್ರಮಾಣದ ಅರವಳಿಕೆ ಮದ್ದು ನೀಡಬೇಕೆಂಬುದು ತಿಳಿಯಲಾಗುತ್ತದೆ.ಇದರಿಂದ ರೋಗಿಗಳಿಗೆ ಹೆಚ್ಚಿನ ಪ್ರಮಾಣದ ಅರವಳಿಕೆ ಮದ್ದು ನೀಡುವ ಪ್ರಮೇಯ ಇರುವುದಿಲ್ಲ. ಆಸ್ಪತ್ರೆಯಲ್ಲಿ ಕ್ಷಯರೋಗ ಪೀಡಿತ ರೋಗಿಗಳ ಕಫಾ ಪರೀಕ್ಷೆಗೆ ಬಳಸುವ ಸಿ-ನ್ಯಾಟ್ ಯಂತ್ರದಿಂದ ರೋಗದ ಪ್ರಮಾಣವನ್ನು ಅತ್ಯಂತ ನಿಖರವಾಗಿ ತಿಳಿಯಬಹುದಾಗಿದ್ದು ರೋಗಿಗಳಿಗೆ ಮುಂದಿನ ಚಿಕಿತ್ಸೆ ನೀಡಲು ಅನುಕೂಲವಾಗಲಿದೆ ಎಂಬ ಮಾಹಿತಿಯನ್ನು ನೀಡಿದರು.
ಇದೇ ಸಮಯದಲ್ಲಿ ಶಾಸಕರು ಎಪಿಎಲ್ ಕುಟುಂಬದವರಿಗೆ 1.5 ಲಕ್ಷದವರೆಗೆ ಬಿಪಿಎಲ್ ಕಾರ್ಡುದಾರರಿಗೆ 5 ಲಕ್ಷದವರೆಗೆ ಉಚಿತ ಚಿಕಿತ್ಸೆ ನೀಡಲಾಗುವ ಆಯುಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ ಪಾಕ್ಷಿಕ ಜಾಗೃತಿ ಆಂದೋಲನವನ್ನು ಸಹ ಉದ್ಘಾಟಿಸಿದರು.
ಈ ಸಮಯದಲ್ಲಿ ವೈದ್ಯರಾದ ಸುರೇಶ್ ಬಸರಕೋಡ್,ಎಸ್.ಎಸ್.ಕೋಲ್ಕಾರ್, ಎ.ವಿ. ಸುರೇಶ್ ಕುಮಾರ್, ಪ್ರತಾಪ್ ಯಶ್ವಂತ್, ಸಿಬ್ಬಂದಿಗಳಾದ ಉಮ್ಲಾನಾಯಕ್,ಶೋಭಾ ದೊಡ್ಡ ಮನಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.



