ನವದೆಹಲಿ: ಎಂಎಲ್ ಸಿ ಹೆಚ್.ವಿಶ್ವನಾಥ್ ಅನರ್ಹತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಈ ಮೂಲಕ ಸಚಿವರಾಗುವ ಕನಸು ಕಂಡಿದ್ದ ಹೆಚ್.ವಿಶ್ವನಾಥ್ ಗೆ ಮತ್ತೆ ಹಿನ್ನಡೆಯಾದಂತಾಗಿದೆ. ನಾಮನಿರ್ದೇಶನ ಆಧಾರದಲ್ಲಿ ಸಚಿವ ಸ್ಥಾನ ಅಸಾಧ್ಯ ಎಂದು ಈ ಹಿಂದೆ ಹೈಕೋರ್ಟ್ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ವಿಶ್ವನಾಥ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಇದೀಗ ವಿಧಾನ ಪರಿಷತ್ ಗೆ ನಾಮನಿರ್ದೇಶನ ಮಾಡಿದ್ದ ಆಧಾರದ ಮೇಲೆ ಸಚಿವ ಸ್ಥಾನ ನೀಡಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಹೈಕೋರ್ಟ್ ಆದೇಶವನ್ನು ಸುಪ್ರೀಂ ಎತ್ತಿ ಹಿಡಿದಿದೆ. ಸಾಹಿತ್ಯ ಕೋಟಾದಡಿಯಲ್ಲಿ ರಾಜ್ಯ ಸರ್ಕಾರ ವಿಶ್ವನಾಥ್ ಅವರನ್ನು ವಿಧಾನ ಪರಿಷತ್ ಗೆ ನಾಮನಿರ್ದೇಶನ ಮಾಡಿತ್ತು. ನಾಮನಿರ್ದೇಶನದ ಬಳಿಕ ಸಚಿವರಾಗಲು ವಿಶ್ವನಾಥ್ ಪ್ರಯತ್ನಿಸಿದ್ದರು. ಆದರೆ ಇದೀಗ ಅವರ ಕನಸು ನುಚ್ಚು ನೂರಾಗಿದೆ. .



