ದಾವಣಗೆರೆ : ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಸಮಿತಿಗಳನ್ನು ರಚಿಸಿದ್ದು, ಜೀವ ವೈವಿಧ್ಯ ದಾಖಲಾತಿ ಪೂರ್ಣಗೊಂಡಿದೆ. ಜಿಲ್ಲೆಯಲ್ಲಿ ಸಾಕಷ್ಟು ಜೀವ ವೈವಿಧ್ಯ ಹಾಟ್‍ಸ್ಪಾಟ್‍ಗಳಿದ್ದು, ಕೊಮಾರನಹಳ್ಳಿ ಗುಡ್ಡ ಅತ್ಯಂತ ಮೌಲ್ಯಯುತ ಜೀವ ವೈವಿಧ್ಯವನ್ನು ಹೊಂದಿದೆ. ಈ ಹಿಂದಿನ ವರ್ಷಗಳಲ್ಲಿ ಸಾಕಷ್ಟು ಗಿಡಮರಗಳು ಕಂಡು ಬರುತ್ತಿದ್ದ ಗುಡ್ಡದಲ್ಲಿ ಇತ್ತೀಚಿನ ದಿನಗಳಲ್ಲಿ ಜೋಳದ ಬೆಳೆ ಕಂಡುಬರುತ್ತಿದೆ. ಈ ಪ್ರದೇಶವನ್ನು ಸಂರಕ್ಷಣೆ ಮಾಡಬೇಕಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.
ಮಂಗಳವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಅರಣ್ಯ ಪರಿಸರ ಮತ್ತು ಜೀವ ವೈವಿಧ್ಯ ಸಂರಕ್ಷಣೆ ಕುರಿತಾದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕುಂದುವಾಡ ಕೆರೆಯು ಒಂದು ಪ್ರಮುಖ ಜೀವ ವೈವಿಧ್ಯ ತಾಣವಾಗಿದ್ದು, ಹಲವು ಬಗೆಯ ಪಕ್ಷಿ ಸಂಕುಲಗಳು ಕಂಡು ಬರುತ್ತವೆ. ಈ ಕೆರೆಯನ್ನು ರೂ.18 ಕೋಟಿ ವೆಚ್ಚದಲ್ಲಿ ಅಭಿವೃದ್ದಿಪಡಿಸಲಾಗುತ್ತಿದೆ ಎಂದರು.
ನಗರದಲ್ಲಿ 6 ಸಾವಿರ ಗಿಡಗಳನ್ನು ನೆಡುವ ಮೂಲಕ ಹಸಿರನ್ನು ಹೆಚ್ಚಿಸಲು ಹಾಗೂ ಅವುಗಳ ಮೂರು ವರ್ಷಗಳ ನಿರ್ವಹಣೆಗೆ ಗುತ್ತಿಗೆದಾರರಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಪರಿಸರ ಸಂರಕ್ಷಣೆಗೆ ಜಿಲ್ಲೆಯಲ್ಲಿ ಸಿಎಸ್‍ಆರ್ ನಿಧಿ ಕಡಿಮೆ ಇದ್ದು, ಹರಪನಹಳ್ಳಿ ತಾಲ್ಲೂಕು ಬಳ್ಳಾರಿ ಜಿಲ್ಲೆಗೆ ಸೇರಿದ ಮೇಲೆ ಮತ್ತಷ್ಟು ಕಡಿಮೆಯಾಗಿದೆ. ಈ ವರ್ಷ ಗಣಿ ಮತ್ತು ಭೂ ಇಲಾಖೆಯಿಂದ ಅರಣ್ಯ ಇಲಾಖೆಗೆ ರೂ.10 ಲಕ್ಷ ನೀಡಲಾಗಿದೆ ಎಂದರು.



