ದಾವಣಗೆರೆ: ಜೈವಿಕ ಸಂಪನ್ಮೂಲ ರಕ್ಷಿಸುವ ನಿಟ್ಟಿನಲ್ಲಿ ಈಗಾಗಲೆ ಸರ್ಕಾರ ನಿಷೇಧಿಸಿರುವ ಕೀಟನಾಶಕಗಳ ಮಾರಾಟವನ್ನು ತಡೆಗಟ್ಟುವ ಕಾರ್ಯವನ್ನು ಕೃಷಿ ಇಲಾಖೆ ಅಧಿಕಾರಿಗಳು ಮಾಡಬೇಕಿದ್ದು, ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಹೇಳಿದರು.
ಜೈವಿಕ ಸಂಪನ್ಮೂಲ ರಕ್ಷಿಸುವ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಏರ್ಪಡಿಸಿದ್ದ ಸಮಾಲೋಚನಾ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಈ ನಾಡಿನ ಸಮಸ್ತ ಜೀವಸಂಕುಲಗಳನ್ನು ರಕ್ಷಿಸುವುದು, ಎಲ್ಲ ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸಿ, ಅವುಗಳ ಸಂಯಮಶೀಲ ಬಳಕೆಯ ವಿಧಾನಗಳನ್ನು ಜಾರಿಗೆ ತರುವಲ್ಲಿ ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಜವಾಬ್ದಾರಿ ಮಹತ್ವದ್ದಾಗಿದೆ. ಪರಿಸರಕ್ಕೆ ಹಾಗೂ ಜೀವ ಸಂಕುಲಕ್ಕೆ ಮಾರಕವಾಗಿರುವ ಹಲವು ಬಗೆಯ ಕೀಟನಾಶಕಗಳ ಬಳಕೆ ಮತ್ತು ಮಾರಾಟವನ್ನು ಸರ್ಕಾರ ನಿಷೇಧಿಸಿದೆ. ಆದರೆ ಬಹಳಷ್ಟು ಗೊಬ್ಬರದ ಅಂಗಡಿಗಳಲ್ಲಿ ಇವು ಇನ್ನೂ ಮಾರಾಟವಾಗುತ್ತಿರುವ ಸಾಧ್ಯತೆಗಳಿವೆ. ಇದರಿಂದಾಗಿ ಪರಿಸರಕ್ಕೆ ಹಾನಿಯಾಗುವುದರ ಜೊತೆಗೆ ಭೂಮಿ, ಜಲಚರ ಹಾಗೂ ಇತರೆ ಜೀವ ಸಂಕುಲವೂ ಕೂಡ ಸಂಕಷ್ಟಕ್ಕೆ ಸಿಲುಕಿದೆ. ನಿಷೇಧಿತ ಕೀಟನಾಶಕ ಮಾರಾಟ ತಡೆಗೆ ಕೃಷಿ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದರು.