ಡಿವಿಜಿಸುದ್ದಿ.ಕಾಂ, ದಾವಣಗೆರೆ: ಅಧಿವೇಶನದಲ್ಲಿ ದೃಶ್ಯ ಮತ್ತು ಮುದ್ರಣ ಮಾಧ್ಯಮಗಳ ಕ್ಯಾಮೆರಾ ನಿರ್ಬಂಧ ವಿರೋಧಿಸಿ ಜಿಲ್ಲಾ ವರದಿಗಾರರ ಕೂಟದಿಂದ ಪ್ರತಿಭಟನೆ ನಡೆಸಲಾಯಿತು.
ವರದಿಗಾರರ ಕೂಟದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಎಸಿ ಕಚೇರಿಗೆ ತೆರಳಿ ತಹಶೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ, ಸ್ಪೀಕರ್ ಹಾಗೂ ಮುಖ್ಯಮಂತ್ರಿಗೆ ನಿರ್ಬಂಧ ತೆರವುಗೊಳಿಸುವಂತೆ ಮನವಿ ಸಲ್ಲಿಸಿದರು.
ಸ್ಪೀಕರ್ ಅವರ ಈ ನಿರ್ಧಾರ ಪ್ರಜಾತಂತ್ರ ವ್ಯವಸ್ಥೆಗೆ ವಿರುದ್ಧವಾಗಿದೆ. ಅಧಿವೇಶನದ ದೃಶ್ಯಾವಳಿಗಳನ್ನು ನೇರ ಪ್ರಸಾರಕ್ಕೆ ಅವಕಾಶ ನೀಡಬೇಕು. ಮೂಲಕ ಕಲಾಪದಲ್ಲಿ ಏನೆಲ್ಲ ಚರ್ಚೆ ಆಗುತ್ತದೆ ಎಂಬುದನ್ನು ಜನರಿಗೆ ತಲುಪಿಸಲು ಸಾಧ್ಯ. ಈ ಕೂಡಲೇ ಸರ್ಕಾರ ನಿರ್ಬಂಧ ಆದೇಶವನ್ನು ವಾಪಸ್ಸು ಪಡೆಯಬೇಕೆಂದು ಮನವಿ ಸಲ್ಲಿಸಲಾಯಿತು. ಎಲ್ಲಾ ವಿಷಯವವನ್ನು ಗೌಪ್ಯ ವ್ಯವಹಾರ ಎನ್ನುವಂತಾಗಿರುವುದು ಸರಿಯಲ್ಲ. ಸ್ಪೀಕರ್ ತಮ್ಮ ಈ ನಿರ್ಧಾರ ಹಿಂತೆಗೆದುಕೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಕಲಾಪಗಳನ್ನು ನೇರವಾಗಿ ವೀಕ್ಷಿಸುವ ಜನರ ಹಕ್ಕನ್ನು ರಕ್ಷಿಸುಲು ಮುಂದಾಗಬೇಕೆ ವಿನಃ ಮಾಧ್ಯಮಗಳ ಮೇಲೆ ನಿರ್ಬಂಧ ಹೇರುವುದು ಸರಿಯಲ್ಲ. ಜನರ ಹಕ್ಕುಗಳನ್ನು ಕಿತ್ತುಕೊಂಡು ಪ್ರಜಾಪ್ರಭುತ್ವದ ಕತ್ತು ಹಿಸುಕುವ ಕೃತ್ಯ ಇದಾಗಿದ್ದು, ಸರಕಾರದ ಈ ಮಾಧ್ಯಮ ವಿರೋಧಿ ನಡುವಳಿಕೆ ಸರಿಯಲ್ಲ ಎಂದು ಪ್ರತಿಭಟನೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಬಿ.ಎನ್.ಮಲ್ಲೇಶ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರ ಮಾಧ್ಯಮ ಹಕ್ಕುಗಳನ್ನು ಹತ್ತಿಕ್ಕೂವ ಕೆಲಸ ಮಾಡುತ್ತಿವೆ. ರಾಜ್ಯ ಸರಕಾರ ಅಧಿವೇಶನಕ್ಕೆ ಮುದ್ರಣ ಹಾಗೂ ದೃಶ್ಯ ಮಾಧ್ಯಮ ಕ್ಯಾಮೆರಾಗಳನ್ನು ನಿಷೇಧ ಹೇರಿರುವುದು ಖಂಡನೀಯ. ಇದೊಂದು ಮಾಧ್ಯಮಗಳ ಸ್ವಾತಂತ್ರ್ಯ ಹರಣ ಎಂದರು.
ಸಮಿತಿ ಸದಸ್ಯ ವರದರಾಜ್ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ನಾಗರಾಜ್ ಎಸ್.ಬಡಿದಾಳ್, ಖಜಾಂಚಿ ಎ.ಎಲ್.ತಾರನಾಥ್, ಏಕಾಂತಪ್ಪ, ಮಂಜುನಾಥ್, ರಮೇಶ್ ಜಗೀರ್‌ದಾರ್, ಬಾಲಕೃಷ್ಣ ಶೀಬಾರ್ಲ, ರವಿಬಾಬು, ಗಂಗಾಧರ್, ನಂದೀಶ್, ಮಲ್ಲಿಕಾರ್ಜುನ್, ವಸಂತ್, ಬಸವರಾಜ್, ಶಂಭು, ಪ್ರಭು ರುದ್ದೇಗೌಡ, ವಿನಾಯಕ ಪೂಜಾರ್, ಪ್ರವೀಣ್ ಬಾಡಾ, ಪುನೀತ್ ಅಪ್ತಿ, ನಾಗರಾಜ್ ಎ.ಸಿ, ಸಂತೋಷ್ ಕಬ್ಬೂರ್, ರಮೇಶ್, ನಿಂಗಪ್ಪ, ಲೋಕೇಶ್, ಸಂಜಯ್, ಮಧು ನಾಗರಾಜ್, ರಾಮಪ್ರಸಾದ್, ಚನ್ನಕೇಶವ ಶೀಲವಂತ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.



