ಬೆಂಗಳೂರು: ಚಳಿಗಾಲದಲ್ಲಿ ಕೊರೊನಾ ಸೋಂಕು ಉಲ್ಭಣವಾಗುವ ಸಾಧ್ಯತೆ ಇರುವ ಹಿನ್ನೆಲೆ, ರಾಜ್ಯದಲ್ಲಿ ಡಿಸೆಂಬರ್ ಅಂತ್ಯದವರೆಗೆ ಶಾಲೆ ಮತ್ತು ಪದವಿ ಪೂರ್ವ ವಿಶ್ವ ವಿದ್ಯಾಲಯಗಳನ್ನು ಪ್ರಾರಂಭಿಸುವುದಿಲ್ಲ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.
ತಜ್ಞರು ಮತ್ತು ಆರೋಗ್ಯ ಇಲಾಖೆಯ ಮೇರೆಗೆ ಶಾಲೆಗಳನ್ನ ತೆರೆಯುವ ನಿರ್ಧಾರವನ್ನ ಕೈಬಿಟ್ಟಿದ್ದು, ಡಿಸೆಂಬರ್ ಅಂತ್ಯದಲ್ಲಿ ಮತ್ತೊಮ್ಮೆ ಸಭೆ ನಡೆಸಿ, ಜನವರಿಯಲ್ಲಿ ಶಾಲೆ ಪ್ರಾರಂಭಿಸಬೇಕಾ..? ಬೇಡವೋ ಎನ್ನುವ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಶಾಲೆ ಆರಂಭವಾಗುವ ವರೆಗೂ ದೂರದರ್ಶನ, ಯೂಟ್ಯೂಬ್ ಮತ್ತು ವಾಟ್ಸಾಪ್ ಮೂಲಕ ತರಗತಿಗಳನ್ನ ಮುಂದುವರೆಸಲಾಗುವುದು ಎಂದು ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಇಂದು ರಾಜ್ಯದಲ್ಲಿ ಶಾಲೆ ಆರಂಭಿಸುವ ಕುರಿತು ಸಿಎಂ ನೇತೃತ್ವದಲ್ಲಿ ಶಿಕ್ಷಣ ಸಚಿವರು, ಅಧಿಕಾರಿಗಳು ಮತ್ತು ತಜ್ಞರೊಂದಿಗೆ ಸಭೆ ನಡೆಸಲಾಯ್ತು. ಈ ಸಭೆಯಲ್ಲಿ ರಾಜ್ಯದಲ್ಲಿ ಜನವರಿ ವರೆಗೆ ಶಾಲೆ, ಪದವಿ ಪೂರ್ವ ವಿದ್ಯಾಲಯಗಳನ್ನು ಆರಂಭಸುವುದಿಲ್ಲ ಎನ್ನುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸಭೆಯ ಬಳಿಕ ಮಾತನಾಡಿದ ಸಿಎಂ ಬಿ.ಎಸ್. ಯಡಿಯೂರಪ್ಪ, ರಾಜ್ಯದಲ್ಲಿ ಡಿಸೆಂಬರ್ ವರೆಗೂ ಶಾಲೆ ಆರಂಭ ಇಲ್ಲ. ಶಾಲೆ ಆರಂಭ ಮಾಡಿದರೆ ಕೊರೊನಾ ವೈರಸ್ ಹೆಚ್ಚಳವಾಗುವ ಸಾಧ್ಯತೆ ಇದೆ. ಹೀಗಾಗಿ ಡಿಸೆಂಬರ್ ಅಂತ್ಯದವರೆಗೂ ಶಾಲೆ ಆರಂಭ ಇಲ್ಲ ಎಂದು ಹೇಳಿದ್ದಾರೆ. ತಜ್ಞರ ಅಭಿಪ್ರಾಯ ಪರಿಗಣಿಸಿ ಡಿಸೆಂಬರ್ ವರೆಗೂ ಶಾಲೆ ತೆರೆಯದಿರಲು ನಿರ್ಧರಿಸಲಾಗಿದೆ. ಡಿಸೆಂಬರ್ ಕೊನೆ ವಾರದಲ್ಲಿ ಮತ್ತೊಮ್ಮೆ ಸಭೆ ಸೇರಿ ಶಾಲೆ ಆರಂಭದ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.



