ದಾವಣಗೆರೆ: ಗ್ರಾಮೀಣ ಭಾಗದ ನಾಗರಿಕರಿಗೆ ಹಲವು ಸೇವೆಗಳನ್ನು ಒಂದೇ ಸೂರಿನಡಿ ಒದಗಿಸುವ ಗ್ರಾಮ-ಒನ್ ಸೇವೆಗೆ ದಾವಣಗೆರೆ ತಾಲೂಕಿನ ಮಾಳಗೊಂಡನಹಳ್ಳಿ ಗ್ರಾಮದಲ್ಲಿ ಇಡಿಸಿಎಸ್ ನಿರ್ದೇಶನಾಲಯ,ಇ-ಆಡಳಿತ ಇಲಾಖೆ ವತಿಯಿಂದ ಆಯೋಜಿಸಿದ್ದ ಗ್ರಾಮ_ಒನ್ ವರ್ಚುಯಲ್ ಕಾರ್ಯಕ್ರಮವನ್ನು ಬೆಂಗಳೂರಿನಿಂದ ಸಿಎಂ ಯಡಿಯೂರಪ್ಪ ಚಾಲನೆ ನೀಡಿದರು.
ವರ್ಚುಯಲ್ ನಲ್ಲಿ ಮುಖಾಂತರ ಮಾತನಾಡಿದ ಸಿಎಂ, ಸರ್ಕಾರದ ಮಹಾತ್ವಾಕಾಂಕ್ಷಿ ಕಾರ್ಯಕ್ರಮ ಇದಾಗಿದ್ದು, ಸುಮಾರು 750 ಸೇವೆಗಳನ್ನು ಒಂದೇ ಸೂರಿನಡಿ ಒದಗಿಸಿರುವುದರಿಂದ ಸಾರ್ವಜನಿಕರು ತಮ್ಮ ಕೆಲಸಗಳಿಗೆ ನಗರಕ್ಕೆ ಅಲೆಯುವುದು ತಪ್ಪುತ್ತದೆ ಎಂದರು.
ಈ ಹಿನ್ನಲೆಯಲ್ಲಿ ದಾವಣಗೆರೆ ಜಿಲ್ಲೆಯ ನೂರು ಗ್ರಾಮಗಳಲ್ಲಿ ಈ ಸೇವೆ ಸಿಗಲಿದ್ದು, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಬೆಂಗಳೂರು-ಒನ್ ಕರ್ನಾಟಕ-ಒನ್ ರೀತಿಯಲ್ಲಿ ಹಲವು ಸೇವೆಗಳು ಸಿಗಲಿವೆ. ಮಾಹಿತಿ ಹಕ್ಕು ಕಾಯ್ದೆ ಸೇವೆಗಳು, ಮುಖ್ಯಮಂತ್ರಿಗಳ ಪರಿಹಾರ ಸೇವೆಗಳು, ಕೃಷಿ ಇಲಾಖೆ ಸೇವೆಗಳು, ಕಾರ್ಮಿಕ ಇಲಾಖೆ ಸೇವೆಗಳು, ವೃದ್ದಪ್ಯಾ ವೇತನ, ಅಂಗವಿಕಲರ ವೇತನ, ಒಳಗೊಂಡಂತೆ ಹಲವು ಸೇವೆಗಳು ತಮ್ಮ ಮನೆಬಾಗಿಲಲ್ಲಿ ಸಿಗಲಿವೆ.
ತಮ್ಮ ಸಮಯ ಉಳಿತಾಯವಾಗುವುದರೊಂದಿಗೆ ಮಧ್ಯವರ್ತಿಗಳ ಹಾವಳಿ ತಪ್ಪಿಸಬಹುದು. ಈ ಕೇಂದ್ರಗಳು ಬೆಳಿಗ್ಗೆ 8 ರಿಂದ ರಾತ್ರಿ 8 ಗಂಟೆಯವರೆಗೆ ಸಾರ್ವಜನಿಕರಿಗೆ ಸುಗಮವಾಗಿ ಸೇವೆಗಳನ್ನು ನೀಡಲಿವೆ. ಈಗಾಗಲೇ ಸಕಾಲ ಯೋಜನೆಯಡಿ ಸಕಾಲದಲ್ಲಿ ಹಲವು ಸೇವೆಗಳನ್ನು ಒದಗಿಸಲಾಗುತ್ತಿದೆ. ಇದರೊಂದಿಗೆ ಮೈಕ್ರೋ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸಲ್ಲಿಸಲಾಗುತ್ತಿದ್ದು, ರಾಜ್ಯದ ಎಲ್ಲಾ ಗ್ರಾಮಗಳಲ್ಲಿ ಇಂಥಹ ಕೇಂದ್ರಗಳು ಆರಂಭವಾಗಲಿದ್ದು ನಾಗರೀಕರಿಗೆ ಸೇವೆಗಳು ಮತ್ತಷ್ಟು ಹತ್ತಿರವಾಗಲಿವೆ ಎಂದರು.
ಪ್ರಾಥಮಿಕ ಪೌಢ್ರಶಿಕ್ಷಣ ಹಾಗೂ ಸಕಾಲ ಸಚಿವರಾದ ಎಸ್. ಸುರೇಶ್ ಕುಮಾರ್ ಮಾತಾನಾಡಿ, ಮಾನ್ಯ ಮುಖ್ಯಮಂತ್ರಿಗಳು ಆಯವ್ಯಯ ಭಾಷಣದಲ್ಲಿ ಗ್ರಾಮ-ಒನ್ ಯೋಜನೆ ಘೋಷಿಸಿದ್ದರು. ಅದರಂತೆ ಇಂದು ಮಾಳಗೊಂಡನಹಳ್ಳಿ ಗ್ರಾಮದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದ್ದು ಇದೊಂದು ಚರಿತ್ರಾರ್ಹ ಕಾರ್ಯಕ್ರಮವಾಗಿದೆ. ಹಾಗೂ ಈ ಗ್ರಾಮದ ಹೆಸರು ರಾಜ್ಯಾಂದ್ಯಂತ ಚಿರಪರಿಚಿತವಾಗಲಿದೆ ಎಂದರು.
5000ಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಗ್ರಾಮಗಳಲ್ಲಿ ಇಂತಹ ಕೇಂದ್ರಗಳನ್ನು ಆರಂಭಿಸಲಾಗುತ್ತಿದ್ದು ದಾವಣಗೆರೆ ಜಿಲ್ಲೆಯಲ್ಲಿ 100 ಗ್ರಾಮಗಳಲ್ಲಿ ಈ ಕೇಂದ್ರಗಳು ಕಾರ್ಯನಿರ್ವಹಿಸಲಿವೆ. ಮಾನ್ಯ ಮುಖ್ಯಮಂತ್ರಿಗಳು ಇಂತಹ ಕಾರ್ಯಕ್ರಮಕ್ಕೆ ಬೆಂಬಲ ನೀಡಿ ಬೆನ್ನು ತಟ್ಟಿ ನಮ್ಮನ್ನು ಪ್ರೋತ್ಸಾಹಿಸಿದ್ದಾರೆ. ಈ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ಎಲ್ಲಾ ಸವಾಲುಗಳನ್ನು ಎದುರಿಸಿ ಸಾರ್ವಜನಿಕರ ಕೆಲಸಗಳನ್ನು ಮಾಡಿಕೊಡಬೇಕಾಗಿದೆ. ರಾಜ್ಯದ ಸಾಮಾನ್ಯ ನಾಗರೀಕನಿಗೂ ಸೇವೆ ಸಿಗುವಂತಹ ಕಾರ್ಯಕ್ರಮ ಇದೊಂದು ಮೈಲಿಗಲ್ಲು ಆಗಲಿದೆ. ಇದರೊಂದಿಗೆ ಮೈಕ್ರೋ ಬ್ಯಾಂಕಿಂಗ್ ಸೇವೆಗಳನ್ನು ಆರಂಭಿಸಲಾಗುತ್ತಿದ್ದು, ಗ್ರಾಮೀಣ ಭಾಗದ ಸ್ತ್ರೀಶಕಿ ್ತಸಂಘಗಳಿಗೆ ಅನುಕೂಲವಾಗಲಿದೆ. ಈ ಹಿಂದೆ 2012ರಲ್ಲಿ ಮುಖ್ಯಮಂತ್ರಿಗಳು ಸಕಾಲ ಜವಾಬ್ದಾರಿ ನನಗೆ ನೀಡಿದಾಗ ಅದರಲ್ಲಿ 151 ಸೇವೆಗಳು ಇದ್ದವು. ಇಂದು 1050ಕ್ಕೂ ಹೆಚ್ಚು ಸೇವೆಗಳು ಸಕಾಲದಲ್ಲಿ ಇದ್ದು, ಅದರಂತೆ ಗ್ರಾಮ-ಒನ್ ಕಾರ್ಯಕ್ರಮ ಕೂಡ ಯಶಸ್ವಿ ಆಗಲಿದೆ ಎಂದರು.
ಸಂಸದರಾದ ಜಿ.ಎಂ ಸಿದ್ದೇಶ್ವರ್ ಮಾತಾನಾಡಿ, ಸರ್ಕಾರದ ಹಲವಾರು ಸೇವೆಗಳನ್ನು ಈ ಕೇಂದ್ರಗಳಿಂದ ಪಡೆಯಬಹುದು. ಹಿರಿಯ ನಾಗರೀಕರು ತಮ್ಮ ಮನೆಬಾಗಿಲಲ್ಲಿ ಸೇವೆ ಪಡೆಯಬಹುದಾಗಿದ್ದು ಅಧಿಕಾರಿಗಳು ತಮ್ಮ ಮನೆ ಬಾಗಿಲಲಿಗೆ ಬಂದು ಸೇವೆ ನೀಡಲಿದ್ದಾರೆ ಹಾಗಾಗಿ ಈ ಕೇಂದ್ರಗಳ ಸದ್ಬಳಕೆ ಮಾಡಿಕೊಳ್ಳಬೇಕು. ಹಾಗೂ ಇಡೀ ರಾಜ್ಯಾಂದ್ಯಾಂತ ಈ ಕೇಂದ್ರಗಳು ಸೇವೆ ನೀಡಲಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ಎಸ್.ಎ ರವೀಂದ್ರನಾಥ್ ಮಾತಾನಾಡಿ, ಇಂತಹ ಒಂದು ಅಭೂತಪೂರ್ವ ಕಾರ್ಯಕ್ರಮಕ್ಕೆ ನನ್ನ ಕ್ಷೇತ್ರವನ್ನು ಆಯ್ಕೆಮಾಡಿಕೊಂಡಿರುವುದು ಅಭಿನಂದನಾರ್ಹ ಹಾಗೂ ರಾಜ್ಯದಲ್ಲಿಯೇ ಗ್ರಾಮ-ಒನ್ ಕಾರ್ಯಕ್ರಮ ಆರಂಭವಾಗುತ್ತಿರುವ ಈ ಸೇವೆ ನೀಡುತ್ತಿರುವ ಮೊದಲ ಗ್ರಾಮ ಇದಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ ಬಸವರಾಜ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಎಂ.ಪಿ. ರೇಣುಕಾಚಾರ್ಯ, ಜಗಳೂರು ಶಾಸಕರಾದ ಎಸ್.ವಿ ರಾಮಚಂದ್ರ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ದೀಪಾಜಗದೀಶ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿ.ಪಂ ಸಿಇಒ ಪದ್ಮಬಸವಂತಪ್ಪ, ಎಸ್.ಪಿ. ಹನುಮಂತರಾಯ ಉಪಸ್ಥಿತಿರಿದ್ದರು.