ಡಿವಿಜಿ ಸುದ್ದಿ, ಬಾಗಲಕೋಟೆ: ವಾಲ್ಮೀಕಿ ಸಮುದಾಯಕ್ಕೆ ಶೇ 7.5ರಷ್ಟು ಮೀಸಲಾತಿ ಕಲ್ಪಿಸುವಲ್ಲಿ ಅ. 31ರೊಳಗೆ ಸಿಹಿ ಸುದ್ದಿ ನೀಡಬೇಕು. ಇಲ್ಲವೇ, ಉಗ್ರ ಹೋರಾಟ ಎದುರಿಸಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ವಾಲ್ಮೀಕಿ ಗುರುಪೀಠದ ಜಗದ್ಗುರು ಪ್ರಸನ್ನಾನಂದಪುರಿ ಸ್ವಾಮೀಜಿ ಎಚ್ಚರಿಕೆ ಸಂದೇಶ ನೀಡಿದ್ಧಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅ. 21ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಸತ್ಯಾಗ್ರಹ ಆರಂಭವಾಗಲಿದ್ದು, ಅ. 31ರ ಮಹರ್ಷಿ ವಾಲ್ಮೀಕಿ ಜಯಂತಿಯೊಳಗೆ ಮೀಸಲಾತಿ ಹೆಚ್ಚಿಸದಿದ್ದಲ್ಲಿ ಹೋರಾಟ ಅನಿವಾರ್ಯ ಎಂದರು.
ಬಿಜೆಪಿ ಅಧಿಕಾರಕ್ಕೆ ಬಂದರೆ 24 ಗಂಟೆಯೊಳಗೆ ಮೀಸಲಾತಿ ಹೆಚ್ಚಿಸುವುದಾಗಿ ಯಡಿಯೂರಪ್ಪ ಮಾತು ಕೊಟ್ಟಿದ್ದರು. ಫೆ. 9ರಂದು ನಡೆದ ವಾಲ್ಮೀಕಿ ಜಾತ್ರೆಯಲ್ಲೂ ನ್ಯಾಯಮೂರ್ತಿ ನಾಗಮೋಹನದಾಸ್ ವರದಿ ಬಂದ ತಕ್ಷಣ ಮೀಸಲಾತಿ ಪ್ರಮಾಣ ಹೆಚ್ಚಿಸುವುದಾಗಿ ಭರವಸೆ ನೀಡಿದ್ದರು. ಈಗ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ನಾಳೆ ಸಿಎಂ ಭೇಟಿಗೆ ಅವಕಾಶ ಸಿಕ್ಕರೆ, ಇನ್ನೊಮ್ಮೆ ಪ್ರಸ್ತಾಪಿಸುತ್ತೇನೆ ಎಂದರು.

ಶ್ರೀರಾಮುಲುಗೆ ಡಿಸಿಎಂ ಸ್ಥಾನ ಕೊಡದ ವಿಚಾರಕ್ಕೆ ಪ್ರತಿಕ್ರಿಯಿಸಿ, ಮುಂದಿನಗಳಲ್ಲಿ ಮುಖ್ಯಮಂತ್ರಿ ಸ್ಥಾನ ಕೊಡಿ ಅಂತಾ ಕೇಳುತ್ತೇವೆ. ಅದಕ್ಕಿಂದ ಮುಖ್ಯವಾಗಿ ಈಗ 7.5 ಮೀಸಲಾತಿ ಅಗತ್ಯವಾಗಿದೆ. ಹೀಗಾಗಿ ಜಿಲ್ಲಾವಾರು ಸಭೆ ನಡೆಸುತ್ತಿದ್ದೇವೆ ಎಂದರು.



