ಡಿವಿಜಿ ಸುದ್ದಿ, ದಾವಣಗೆರೆ: ಕಾಂಗ್ರೆಸ್ ಪಕ್ಷದ ಮುಖಂಡರು ಇನ್ನೂ ಸೋಲಿನ ಹತಾಶೆಯಿಂದ ಹೊರ ಬಂದಿಲ್ಲ. ಹೀಗಾಗಿ ಸಂಸದರು, ಶಾಸಕರ ವಿರುದ್ಧ ಅನಾವಶ್ಯಕ ಆರೋಪ ಮಾಡುತ್ತಿದ್ದಾರೆ. ನಮ್ಮ ಪಕ್ಷದಲ್ಲಿ ಸರ್ವಾಧಿಕಾರಿ ಧೋರಣೆ ಇಲ್ಲ. ಯಾರು ಸರ್ವಾಧಿಕಾರಿ ಎಂಬುದು ಜನರಿಗೆ ಗೊತ್ತಿದೆ ಎಂದು ಕಾಂಗ್ರೆಸ್ ಮುಖಂಡರಿಗೆ ಮೇಯರ್ ಅಜಯ್ ಕುಮಾರ್ ತಿರುಗೇಟು ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡ ದಿನೇಶ್ ಕೆ. ಶೆಟ್ಟಿ , ಬಿಜೆಪಿ ಆಂತರಿಕ ವಿಚಾರಕ್ಕೆ ತಲೆ ಹಾಕುವ ಅವಶ್ಯಕತೆ ಇಲ್ಲ. ನಮ್ಮ ಪಕ್ಷದಲ್ಲಿ ಯಾವುದೇ ಸರ್ವಾಧಿಕಾರಿ ಧೋರಣೆ ಇಲ್ಲ. ಯಾರು ಸರ್ವಾಧಿಕಾರಿ ರೀತಿ ವರ್ತನೆ ಮಾಡುತ್ತಿದ್ದಾರೆ ಎಂಬುದು ಜನತೆಗೆ ಗೊತ್ತಿದೆ. ಇದಕ್ಕೆ ಜನರು ಚುನಾವಣೆಯಲ್ಲಿ ತಕ್ಕ ಪಾಠ ಕೂಡ ಕಲಿಸಿದ್ದಾರೆ ಎಂದರು.
ಶೆಟ್ಟಿ ಅವರು ಇಂತಹ ಆರೋಪದಿಂದಲೇ ಕಾಂಗ್ರೆಸ್ ಸೋಲು ಕಂಡಿದ್ದಾರೆ. ಇಂತಹವರಿಂದ ಕಾಂಗ್ರೆಸ್ ಗೆ ಯಾವುದೇ ಪ್ರಯೋಜನೆ ಇಲ್ಲ. ಅವರನ್ನು ಪಕ್ಷದಿಂದ ಮೊದಲು ಹೊರ ಹಾಕಿದರೆ, ಕಾಂಗ್ರೆಸ್ ಗೆ ಒಳ್ಳೆದು. ಸಂಸದರು, ಶಾಸಕರು ಮತ್ತು ನನ್ನ ವಿರುದ್ಧ ಆರೋಪ ರಹಿತ ಆರೋಪ ಮಾತನಾಡಿದ್ದಾರೆ. ಯಾವುದೇ ದಾಖಲೆ ಇಲ್ಲದೆ, ಆರೋಪ ಮಾಡುವುದರಲ್ಲಿ ಹುರುಳಿಲ್ಲ. ಮುಂದೆ ಇದೇ ರೀತಿ ಆರೋಪ ಮುಂದುವರಿಸಿದರೆ, ಮಾನ ನಷ್ಟ ಕೇಸ್ ಹಾಕುವುದಾಗಿ ಎಚ್ಚರಿಕೆ ನೀಡಿದರು.
ಸ್ಮಾರ್ಟ್ ಸಿಟಿ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದ ಯೋಜನೆ. ಈ ಯೋಜನೆಗೆ ದಾವಣಗೆರೆ ನಗರ ಸೇರ್ಪಡೆ ಆಗುವಲ್ಲಿ ಸಂಸದರ ಪಾತ್ರ ಮಹತ್ವದಾಗಿದೆ. ಈ ಯೋಜನೆಯನ್ನು ಕಾಂಗ್ರೆಸ್ ನವರು ನಾವೇ ತಂದರು ಎಂದು ಹೇಳಿಕೊಳ್ಳುತ್ತಿದ್ದಾರೆ. ಸೋಲಿನ ಹತಾಶೆಯಿಂದ ಈ ರೀತಿ ಹೇಳುತ್ತಿರಬಹುದು ಎಂದರು.
ಕಾಂಗ್ರೆಸ್ ಮುಖಂಡರು ಸಂಸದರ ಬಗ್ಗೆ ಆರೋಪ ಮಾಡುವುದಕ್ಕಿಂತ ಮೊದಲ ತಮ್ಮ ಪಕ್ಷದ ಆಂತರಿಕ ಸಮಸ್ಯೆಗಳ ಬಗ್ಗೆ ಗಮನಹರಿಸಿದರೆ ಒಳ್ಳೆಯದು. ಬಿಜೆಪಿ ಬಗ್ಗೆ ಮಾತನಾಡಿದರೆ, ಪ್ರಚಾರ ಸಿಗುತ್ತದೆ ಎಂಬ ಭ್ರಮೆಯಿಂದ ಕಾಂಗ್ರೆಸ್ ನಾಯಕರು ಹೊರ ಬರಬೇಕು ಎಂದು ಹೇಳಿದರು.



