ಡಿವಿಜಿಸುದ್ದಿ .ಕಾಂ.ದಾವಣಗೆರೆ: ಇಡೀ ನಗರವನ್ನು ಸ್ವಚ್ಛವಾಗಿಡುವ ಪೌರ ಕಾರ್ಮಿಕರಿಗೆ ಸರ್ಕಾರದ ಈಗಿರುವ ಸೌಲಭ್ಯಗಳ ಜೊತೆಗೆ ಅಗತ್ಯವಿರುವ ಇನ್ನಷ್ಟು ಸೌಲಭ್ಯ ಒದಗಿಸಬೇಕು ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.
ಮಹಾನಗರ ಪಾಲಿಕೆ ಆಯೋಜಿಸಿದ್ದ ಪೌರ ಕಾರ್ಮಿಕ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಮಹಾನ್ ವ್ಯಕ್ತಿಗಳ ದಿನಾಚರಣೆಯಂತೆ ಪೌರ ಕಾರ್ಮಿಕ ದಿನಾಚೆಣೆಯನ್ನು ಸರ್ಕಾರವೇ ಆಚರಿಸುತ್ತಿರುವುದು ಸಂತಸದ ವಿಚಾರ. ಈಗಾಗಲೇ ಸರ್ಕಾರ ಪೌರ ಕಾರ್ಮಿಕರಿಗೆ ಅಗತ್ಯ ಸೌಲಭ್ಯ ನೀಡಿದೆ. ಇದರ ಜೊತೆಗೆ ಇನ್ನಷ್ಟು ಅಗತ್ಯ ಸೌಲಭ್ಯ ನೀಡಬೇಕಿದೆ ಎಂದರು.

ಪೌರ ಕಾರ್ಮಿಕ ಕೆಲಸ ಹಿಂದಿನ ಕಾಲದಷ್ಟು ಸೋಚನೀಯ ಸ್ಥಿತಿಯಲ್ಲಿ ಇಲ್ಲ. ಈಗಾಗಲೇ ಎಲ್ಲಡೆ ಮಶಿನ್ಗಳ ಬಳಕೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ನಗರಕ್ಕೆ ಇನ್ನಷ್ಟು ಮಶಿನ್ ಗಳನು ಬರುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಶಾಸಕ ಎಸ್. ಎ ರವೀಂದ್ರನಾಥ್ ಮಾತನಾಡಿ, ಸ್ಮಾರ್ಟ್ ಸಿಟಿಯಾಗಿರುವ ದಾವಣಗೆರೆ ಸ್ವಚ್ಛತೆಯಲ್ಲಿ ನಂಬರ್ ಒನ್ ಸಿಟಿಯಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ಪೌರ ಕಾರ್ಮಿಕರ ಮೇಲಿದೆ. ಪೌರ ಕಾರ್ಮಿಕರ ಎಲ್ಲಾ ಕೆಲಸಗಳಿಗೆ ನಾನು ಮತ್ತು ಶಾಮನೂರು ಶಿವಶಂಕರಪ್ಪ ಬೆಂಬಲವಾಗಿ ನಿಲ್ಲುತ್ತೇವೆ. ನಿಮ್ಮ ಯಾವುದೇ ಅಹವಾಲು ತಗೆದುಕೊಂಡು ಬಂದರು ಬಗೆಹರಿಸುತ್ತೇವೆ ಎಂದು ಆಶ್ವಾಸನೆ ನೀಡಿದರು.
ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ಉಪಾಧ್ಯಕ್ಷ ಎಲ್. ಹನುಮಂತಪ್ಪ ಮಾತನಾಡಿ, ದಾವಣಗೆರೆಯಲ್ಲಿ ಪೌರ ಕಾರ್ಮಿಕರ ವಸತಿ ಕಲ್ಪಿಸಲು ಸರ್ಕಾರ 36 ಕೋಟಿ ಬಿಡುಗಡೆ ಮಾಡಿದೆ. ಈಗಾಗಲೇ 400 ಮನೆಗಳನ್ನು ನಿರ್ಮಿಸಲಾಗಿದೆ. ರವೀಂದ್ರನಾಥ್ ಮಂತ್ರಿಯಾದ ಸಂದರ್ಭದಲ್ಲಿ 10 ಎಕೆರೆ ಜಾಗವನ್ನು ಕಲ್ಪಿಸಿದರು. ಶಾಮನೂರು ಶಿವಶಂಕರಪ್ಪ ವಸತಿ ನಿರ್ಮಾಣಕ್ಕೆ ಸಹಕಾರ ನೀಡಿದರು ಎಂದರು. ಇನ್ನು 44 ಜನ ಗುತ್ತಿಗೆ ಪೌರ ಕಾರ್ಮಿಕರನ್ನು ಕಾಯಂ ಮಾಡಿದ ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ ಅವರಿಗೆ ಅಭಿನಂದನೆ ಸಲ್ಲಿಸಿದರು.

ಇದಕ್ಕೂ ಮುನ್ನ ಪಾಲಿಕೆ ಕಚೇರಿಯಿಂದ ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪದ ವರೆಗೆ ಮೆರವಣಿ ನಡೆಸಲಾಯಿತು. ಈ ಸಂದರ್ಭದಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿದ ಪೌರ ಕಾರ್ಮಿಕರಿಗೆ ಸನ್ಮಾನಿಸಲಾಯಿತು. ಇದಲ್ಲದೆ ಉತ್ತಮ ಅಂಕಗಳಿಸಿದ ಪೌರ ಕಾರ್ಮಿಕ ಮಕ್ಕಳಿಗೆ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಯಿತು. ದಾವಣಗೆರೆ ಮಹಾನಗರ ಪಾಲಿಕೆ ಪೌರ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಎನ್. ನೀಲಗಿರಿಯಪ್ಪ, ನಗರ ಸ್ವಚ್ಛ ಪೌರ ಕಾರ್ಮಿಕ ಸಂಘದ ಅಧ್ಯಕ್ಷ ಗೋಣೆಪ್ಪ , ಮಹಾನಗರ ಪಾಲಿಕೆ ಮಾಜಿ ಸದಸ್ಯ ಎಂ. ಹಾಲೇಶಪ್ಪ , ಯುವ ಕಾಂಗ್ರೆಸ್ ಮುಖಂಡ ಸಾಗರ್ ಎಲ್.ಎಚ್. ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ ಉಪಸ್ಥಿತರಿದ್ದರು.