ಕೊಟ್ಟೂರು ಭಾಗದ 11 ಕೆರೆ ತುಂಬಿಸುವ ಯೋಜನೆ ಕುರಿತು ತರಳಬಾಳು ಶ್ರೀಗಳೊಂದಿಗೆ ಚರ್ಚೆ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
3 Min Read

ಡಿವಿಜಿ ಸುದ್ದಿ, ಸಿರಿಗೆರೆ: ಬಳ್ಳಾರಿ ಜಿಲ್ಲೆಯ  ನೂತನ ತಾಲ್ಲೂಕು  ಕೊಟ್ಟೂರು ವ್ಯಾಪ್ತಿಯ ಸಾವಿರಾರು  ಭಕ್ತರ ನಿಯೋಗವು ತರಳಬಾಳು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರನ್ನು ಭೇಟಿ ಮಾಡಿ   ಕೊಟ್ಟೂರು ಭಾಗದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಕುರಿತು ವಿಸ್ತೃತ ಚರ್ಚೆ ನಡೆಸಿದರು.

ತರಳಬಾಳು ಹುಣ್ಣಿಮೆ ಮಹೋತ್ಸವದ ಮೂಲಕ ಆಯಾ ಭಾಗದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಶ್ರಮಿಸುವ ಧಾರ್ಮಿಕ ಉತ್ಸವ ಜನಮಾನಸವಾಗಿದೆ.ಇಂತಹ ತರಳಬಾಳು ಹುಣ್ಣಿಮೆ ಉತ್ಸವವು ಈ ಬಾರಿ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಶ್ರೀ ಗುರು ಕೊಟ್ಟೂರೇಶ್ವರರ ಅನುಗ್ರಹದಿ ಕೊಟ್ಟೂರಿನಲ್ಲಿ 2021ರಲ್ಲಿ  ತರಳಬಾಳು ಹುಣ್ಣಿಮೆ ಮಹೋತ್ಸವ ನಡೆಸಲು ಸಂಕಲ್ಪ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಈ ಭಾಗದ ಭಕ್ತಿಯ ಅಭಿಮಾನ ನೂರ್ಮಡಿಯಾಗಿದೆ.

kotturu farmer 2

ಕೊಟ್ಟೂರು ಮತ್ತು ಇತರೆ 11 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಹಿಂದಿನ ಸಮ್ಮಿಶ್ರ ಸರ್ಕಾರದ ಆಯವ್ಯಯದಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ 85 ಕೋಟಿ ಅನುದಾನವನ್ನು ಮೀಸಲಿಟ್ಟಿದ್ದರು.  ತದನಂತರ ಯೋಜನೆಯನ್ನು ಕೊಟ್ಟೂರು ಮತ್ತು ಇತರೆ 16 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಪರಿಷ್ಕರಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದ್ದ ಅಂದಾಜು ರೂ.379 ಕೋಟಿ ಮೊತ್ತದ ಸಮಗ್ರ ಯೋಜನೆಗೆ ಕಳೆದ  ಸಮ್ಮಿಶ್ರ ಸರ್ಕಾರ ಅವಧಿಯಲ್ಲಿ ಸಚಿವ ಸಂಪುಟದ ಅನುಮೋದನೆಗೊಂಡಿದೆ.

ಇದಕ್ಕೆ  ಈಗ ಹತ್ತಾರು  ತಾಂತ್ರಿಕ ಮತ್ತು ಆಡಳಿತಾತ್ಮಕ ಸಮಸ್ಯೆಗಳು ಸಹ ಬೆನ್ನತ್ತಿವೆ. ಶ್ರೀಗಳ ದಿವ್ಯ ನೇತೃತ್ವದಲ್ಲಿ ಸಾವಿರಾರು ಕೋಟಿ ರೂಗಳ  ಏತನೀರಾವರಿ ಯೋಜನೆಗಳು ಫಲಪ್ರದವಾಗಿ ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಕೊಟ್ಟೂರು ಜನತೆಯ ದಶಕಗಳ ಕನಸಿನ ಈ ರೈತಪರ ಯೋಜನೆಯು  ಮುಂಬರುವ ದಿನಗಳಲ್ಲಿ ಕೊಟ್ಟೂರಿನಲ್ಲಿ ನಡೆಯುವ ತರಳಬಾಳು ಹುಣ್ಣಿಮೆ ಮಹೋತ್ಸವದ ಒಳಗಾಗಿ  ಸಾಕಾರಗೊಳಿಸಲು ಶ್ರೀಗಳು ಸರ್ಕಾರದ ಮೂಲಕ  ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು.

ಶಾಸಕ ಎಸ್.ಭೀಮನಾಯ್ಕರವರು, ಮಾಜಿ ಶಾಸಕನೇಮಿರಾಜ ನಾಯ್ಕ ಸಾಹಿತಿ ಕುಂ.ವೀರಭದ್ರಪ್ಪನವರು, ಕರ್ನಾಟಕ ಬೀಜ ನಿಗಮದ ನಿರ್ದೇಶಕ  ರಾಜೇಂದ್ರ ಪ್ರಸಾದ್ ಸೇರಿದಂತೆ ಹಲವು ಮುಖಂಡರು, ಹೋರಾಟಗಾರರು ಸಾವಿರಾರು ಶ್ರೀಗಳಿಗೆ ಮನವಿ ಸಲ್ಲಿಸಿದರು.

kotturu farmer 3

ವಕೀಲರಾದ ಪಂಡಿತರಾಧ್ಯರು ಮಾತನಾಡಿ, ರಾಜ್ಯದ ವಿವಿಧ ಬೃಹತ್ ನೀರಾವರಿ ಯೋಜನೆಗಳು ಅನುಷ್ಠಾನಗೊಳ್ಳುವಲ್ಲಿ ಶ್ರೀಗಳ ಪಾತ್ರ ಅಪಾರ. ಶ್ರೀಗಳವರು ನಮ್ಮೆಲ್ಲರಿಗೂ ಆಧುನಿಕ  ಜಲಕಂಠೇಶ್ವರರಾಗಿದ್ದಾರೆ ಎಂದರು.

ಕೊಟ್ಟೂರು ಭಾಗದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯು ಶ್ರೀಗಳಿಂದಲೇ ಪೂರ್ಣಗೊಳ್ಳುವ ವಿಶ್ವಾಸ ನಮ್ಮಲ್ಲಿದೆ ಎಂದು ಅಭಿಪ್ರಾಯ ಪಟ್ಟರು.ಕೊಟ್ಟೂರಿನ ಭಾಗದ ಕೆರೆಗಳಿಗೆ ನೀರು ತುಂಬಿಸಿದರೆ ನಮ್ಮ ಬದುಕು ಖಂಡಿತಾವಾಗಿಯು ಹಸನಾಗುವುದು ಎಂದು  ಸರ್ವ ಸಭಿಕರು ಒಕ್ಕೊರಳಿನಿಂದ ಭಿನ್ನಹಿಸಿಕೊಂಡರು.

ಎಲ್ಲರ ಅಭಿಪ್ರಾಯ ನೀಡಿದ ನಂತರ ಮಾತನಾಡಿದ ತರಳಬಾಳು ಶ್ರೀ  ಶಿವಮೂರ್ತಿ ಶಿವಾಚಾರ್ಯ  ಸ್ವಾಮೀಜಿ,   ಕೊಟ್ಟೂರಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯು ಜನಪರವಾದ ಯೋಜನೆಯಾಗಿದೆ.  ಈ ಯೋಜನೆಗೆ ರಾಜ್ಯ ಸರ್ಕಾರವು ತರಳಬಾಳು ಹುಣ್ಣಿಯ ಒಳಗೆ ಅಗತ್ಯ  ಮಂಜೂರಾತಿ ಆದೇಶ ನೀಡಿ ಕಾಮಗಾರಿ ಆರಂಭಕ್ಕೆ ಅಗತ್ಯ ಟೆಂಡರ್ ಕರೆದರೆ ಎಲ್ಲರೂ ಸಹ ಅತ್ಯಂತ ಸಡಗರ ಸಂಭ್ರಮದಿಂದ ಕೊಟ್ಟೂರಿನ ತರಳಬಾಳು ಹುಣ್ಣಿಮೆಯನ್ನು ಆಚರಣೆ ಮಾಡಲಿದ್ದಾರೆ.  ಈ ಬಗ್ಗೆ ಸರ್ಕಾರದ ಮೇಲೆ ಕೊಟ್ಟೂರು ಹಾಗೂ ಸುತ್ತಮುತ್ತಲಿನ ಭಾಗದ ಜನರು, ನಾಯಕರು ಪ್ರಜಾಪ್ರತಿನಿಧಿಗಳು,  ಪಕ್ಷಬೇಧವನ್ನು ಮರೆತು ಒಗ್ಗಟ್ಟಿನಿಂದ ಯೋಜನೆಯ ಜಾರಿಗೆ ಸರ್ಕಾರವನ್ನು ಒತ್ತಾಯಿಸುವಂತೆ ಸಲಹೆ ನೀಡಿದರು.  ಸದರಿ ನೀರಾವರಿ ಯೋಜನೆಯ ಕುರಿತು ಶ್ರೀ ಮಠದಿಂದಲೂ ಸಹ ಸರ್ಕಾರದ ಮೇಲೂ  ಒತ್ತಡ ತರಲಾಗುವುದು ಎಂದು ನಿಯೋಗಕ್ಕೆ ಅಭಯ ನೀಡಿದರು.

ಕೊಟ್ಟೂರು ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೆ ಈಗಾಗಲೇ 60.00 ಲಕ್ಷ ಹಣವನ್ನು ವಾಗ್ದಾನ ಮಾಡಿರುವ ಶಿಷ್ಯ ಬಂಧುಗಳ ಭಕ್ತಿ ಸ್ಮರಿಸಿದ ಶ್ರೀಜಗದ್ಗುರುಗಳವರ ಸನ್ನಿಧಿಗೆ ಇದೇ ಸಂಧರ್ಭದಲ್ಲಿ ಕೊಟ್ಟೂರಿನ ಮುಸಲ್ಮಾನ್ ಸಮುದಾಯದ ನೂರುಲ್ಲಾ ಖಾನ್  ಕೊಟ್ಟೂರಿನ ತರಳಬಾಳು ಹುಣ್ಣಿಮೆಗೆ ದೇಣಿಗೆಯಾಗಿ ರೂ.25,000/- ಗಳ ನಗದನ್ನು ಪೂಜ್ಯರಿಗೆ ಅರ್ಪಿಸಿದರು, ನಗದು ಸ್ವಿಕರಿಸಿದ ಪೂಜ್ಯರು ಇದೇ ನಗದು ಹಣದಿಂದಲೇ ಮುಂದಿನ ಕೊಟ್ಟೂರು ತರಳಬಾಳು ಹುಣ್ಣಿಮೆಯ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆಯಬೇಕು ಎಂದು ಸಂಬಂಧಿಸಿದವರಿಗೆ ಸೂಚಿಸಿ ಸರ್ವರಿಗೂ ಶುಭಕೋರಿ ನಿಯೋಗವನ್ನು ಬೀಳ್ಕೊಟ್ಟರು.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *