ಡಿವಿಜಿ ಸುದ್ದಿ, ಹಳೇಬೀಡು: ಸಿರಿಗೆರೆಯ ತರಳಬಾಳು ಬೃಹನ್ಮಠದ ಮುಂದಿನ ವರ್ಷದ ತರಳಬಾಳು ಹುಣ್ಣಿಮೆ ಮಹೋತ್ಸವು ಬಳ್ಳಾರಿ ಜಿಲ್ಲೆಯ ಕೊಟ್ಟೂರಿನಲ್ಲಿ ನಡೆಯಲಿದೆ ಎಂದು ತರಳಬಾಳು ಬೃಹನ್ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಘೋಷಿಸಿದರು.

ಕಳೆದ 9 ದಿನಗಳಿಂದ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ಕೊನೆಯ ದಿನದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಈ ಬಾರಿ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಹಳೇಬೀಡಿನಲ್ಲಿ ಅತ್ಯಂತ ಯಶಸ್ವಿಯಾಗಿ ತರಳಬಾಳು ಹುಣ್ಣಿಮೆ ಮಹೋತ್ಸವ ನಡೆದಿದೆ. ಮುಂದಿನ ವರ್ಷ ಕೊಟ್ಟೂರಿನಲ್ಲಿ ಆಚರಿಸಲು ತರಳಬಾಳು ಪೀಠ ತೀರ್ಮಾನಿಸಿದೆ ಎಂದು ಘೋಷಿಸಿದಾಗ ಭಕ್ತರು ಹರ್ಷ ವ್ಯಕ್ತಪಡಿಸಿ ಜೈಕಾರ ಕೂಗಿದರು.
ಈ ಬಾರಿ ಹಳೇಬೀಡಿನಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ ಆಚರಿಸಬೇಕು ಎಂದು ಯಾರು ಕೂಡ ಕೇಳಿಕೊಂಡಿರಲಿಲ್ಲ. ಆದರೆ, ಹಿರಿಯ ಶ್ರೀಗಳು ಮೊದಲ ಸಲ ಜಗಳೂರಲ್ಲಿ 1950 ರಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ ಆಚರಿಸಿದ್ದರು. ಆದಾದ ನಂತರದ ವರ್ಷವೇ ಹಳೇಬೀಡಿನಲ್ಲಿ ಆಚರಿಸಿದ್ದರು. ಹೀಗಾಗಿ ಹಳೇಬೀಡಿನಲ್ಲಿ ಕಾರ್ಯಕ್ರಮವನ್ನು ಆಚರಿಸಲು ಹಿರಿಯ ಗುರುಗಳ ಆಶೀರ್ವಾದ ಬಲವೇ ನಮಗೆ ಶ್ರೀ ರಕ್ಷೆಯಾಗಿತ್ತು. ಆದರೆ, ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದೆ. ಇದಕ್ಕೆಲ್ಲ ಕಾರಣ ಮಠದ ಭಕ್ತರು ಎಂದರು.



