ಡಿವಿಜಿ ಸುದ್ದಿ, ಹಳೇಬೀಡು: ನಾನು ಏನಾದ್ರೂ ಮುಖ್ಯಮಂತ್ರಿಯಾದ್ರೆ, ಬಸವ ತತ್ವ ಆಧಾರಿತ ಸರ್ಕಾರವನ್ನು ಜಾರಿಗೆ ತರ್ತಿದ್ದೆ ಎಂದು ಮಾಜಿ ಸಚಿವ ಸಿ.ಎಂ ಇಬ್ರಾಹಿಂ ಹೇಳಿದರು.
ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಬಸವಣ್ಣ- ಪೈಗಂಬರ್ ಚಿಂತನೆಗಳಲ್ಲಿ ಏಕತೆ ಕುರಿತು ಮಾತನಾಡಿದ ಅವರು, ಬಸವ ತತ್ವದಲ್ಲಿ ಯಾವುದೇ ಮೇಲು-ಕೀಳು ಎಂಬ ಭಾವನೆ ಇಲ್ಲ. ಎಲ್ಲರನ್ನು ಸಮಾನವಾಗಿ ಕಾಣುವ ಬಸವಣ್ಣ, ಮನುಷ್ಯ ಮನುಷ್ಯರನ್ನಾಗಿ ಕಾಣಬೇಕು ಎಂದು ಹೇಳಿ, ಎಲ್ಲರಿಗೂ ಸಮಾನತೆ ತತ್ವ ಭೋದಿಸಿದ್ದರು. ಹೀಗಾಗಿ ನಾನು ಏನಾದ್ರೂ ಮುಖ್ಯಮಂತ್ರಿಯಾದ್ರೆ ಬಸವ ತತ್ವ ಸರ್ಕಾರ ಜಾರಿಗೆ ತರ್ತಿದ್ದೆ ಎಂದು ಹೇಳಿದರು.

ಇಂದಿನ ಸಂವಿಧಾನದಲ್ಲಿ ಇರುವ ಅಂಶಗಳನ್ನೇ ಬಸವಣ್ಣ12 ನೇ ಶತಮಾನದಲ್ಲಿಯೇ ಹೇಳಿದ್ದರು. ಬುದ್ಧ , ಬಸವ, ಅಂಬೇಡ್ಕರ್ ಸೇರಿದಂತೆ ಎಲ್ಲಾ ಧರ್ಮದ ಮೂಲ ಸಮಾನತೆಯೇ ಆಗಿದೆ. ಆದರೆ, ನಾವು ಜಾತಿ, ಧರ್ಮ, ಮೇಲು-ಕೀಳು ಭಾವನೆ ಬೆಳಸಿಕೊಂಡು ಸಾಮಾಜದಲ್ಲಿ ಅಶಾಂತಿಯ ವಾತಾವರಣ ಸೃಷ್ಠಿಸಿಕೊಂಡಿದ್ದೇವೆ. ಬಸವಣ್ಣ ದಯಯೇ ಧರ್ಮದ ಮೂಲ ಎಂದು ಹೇಳಿದ್ದರು. ಇಸ್ಲಂ ಧರ್ಮವೂ ಕೂಡ ಇದೆ ತತ್ವನ್ನು ಹೇಳುತ್ತದೆ ಎಂದರು.
ನಾನು ಲಿಂಗಾಯತ ಧರ್ಮದ ಸಮಾನತೆ ತತ್ವನ್ನು ಒಪ್ಪಿದವನಾಗಿದ್ದೇನೆ. ಹೀಗಾಗಿ ನನ್ನನ್ನು ತುಂಬಾ ಜನ ನೀವು ಯಾವಾಗಲೂ ಲಿಂಗಾಯತ ಪರ ಅಂತಾರೆ. ನನಗೆ ತರಳಬಾಳು ಮಠದ ಮೇಲೆ ವಿಶೇಷ ಪ್ರೀತಿ. ಹಿರಿಯ ಗುರುಗಳ ಕಾಲದಿಂದಲೂ ತರಳಬಾಳು ಮಠದೊಂದಿಗೆ ಅನ್ಯೂನತೆ ಹೊಂದಿದ್ದೇನೆ. ಲಿಂಗಾಯತ ತತ್ವ ಮತ್ತು ಮುಸ್ಲಿಂ ತತ್ವ ಶೇ. 70 ರಷ್ಟು ಒಂದೇ ರೀತಿ ಇದೆ. ಹೀಗಾಗಿ ಲಿಂಗಾಯತರಿಗೂ ಮತ್ತು ಮುಸ್ಲಿಂರಿಗೂ ಜಗಳವಾಗುವುದಿಲ್ಲ ಎಂದರು.



